100 ದಿನಗಳ ಕಾಟೇರ ; 3 ಹಾಡುಗಳ ಚಿತ್ರೀಕರಣವಷ್ಟೇ ಬಾಕಿ

Katera_(130) Darshan
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದರ್ಶನ್ ಮತ್ತು ಆರಾಧನಾ ರಾಮ್ ನಟಿಸುತ್ತಿರುವ, ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಸಿನಿಮಾ ‘ಕಾಟೇರ’. ಇತ್ತೀಚೆಗಷ್ಟೆ ಚಿತ್ರದ 100ನೇ ದಿನದ ಚಿತ್ರೀಕರಣ ನಡೆಯಿತು. ಅದೇ ಖುಷಿಯಲ್ಲಿ ಚಿತ್ರತಂಡ ಮೊದಲ ಸುದ್ದಿಗೋಷ್ಠಿ ಕರೆದಿತ್ತು. ನಿರ್ದೇಶಕ ತರುಣ್, ‘ಕಥೆ ಬರೆಯಬಹುದು. ಆದರೆ, ಅದನ್ನು ಸಿನಿಮಾರೂಪಕ್ಕೆ ತರುವುದು ಕಷ್ಟ. ಎರಡು ವರ್ಷಗಳ ಹಿಂದೆ ಕರೊನಾ ಸಮಯದಲ್ಲಿ ಜಡೇಶ್ ಹಂಪಿ ಈ ಕಥೆ ಹೇಳಿದರು. ‘ರಾಬರ್ಟ್’ ಸಮಯದಲ್ಲಿ ದರ್ಶನ್ ಮತ್ತೊಂದು ಸಿನಿಮಾ ಮಾಡೋಣ ಎಂದಿದ್ದರು. ಹೀಗಾಗಿ ಅವರಿಗೆ ಈ ಕಥೆ ಹೇಳಿದಾಗ ಇಷ್ಟಪಟ್ಟರು. ಹಲವು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು 70ರ ದಶಕದ ಹಿನ್ನೆಲೆಯಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.

ನಟ ದರ್ಶನ್, ‘ಶೇಕಡಾ 95ರಷ್ಟು ಕೆಲಸಗಳು ಮುಗಿದಿವೆ. ಆದಷ್ಟು ಬೇಗ ರಿಲೀಸ್‌ಗೆ ರೆಡಿಯಾಗುತ್ತಿದ್ದೇವೆ. ರಚಿತಾ ನನ್ನ ಜತೆ ಮೊದಲ ಬಾರಿಗೆ ನಟಿಸಿದರು. ಅವರಿಂದು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದು ಗೊತ್ತು. ಆರಾಧನಾ ಕೂಡ ರಚಿತಾ ಅವರಂತೆಯೇ ಬೆಳೆಯುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ, ಅಂತಹ ಒಳ್ಳೆಯ ಕಲಾವಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕಾಟೇರ’ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿರುವ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್, ‘ಪೋಸ್ಟರ್ ನೋಡಿದರೆ ಇಷ್ಟು ದೊಡ್ಡ ಸಿನಿಮಾದಲ್ಲಿ ನಟಿಸುತ್ತಿರುವುದು ನಾನೇನಾ ಅಂತ ಈಗಲೂ ನನಗೆ ಆಶ್ಚರ್ಯವಾಗುತ್ತದೆ. ಈ ಚಿತ್ರದಿಂದ ಪ್ರತಿದಿನ ಹೊಸತನ್ನು ಕಲಿತಿದ್ದೇನೆ’ ಎಂದು ಹೇಳಿಕೊಂಡರು. ಉಳಿದಂತೆ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತವಿರಲಿದೆ.

ತಾತ-ಮೊಮ್ಮಗ, ರಾಕ್‌ಲೈನ್-ದರ್ಶನ್!
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ‘ದರ್ಶನ್ ಡೇಟ್ಸ್ ಇದ್ದರೂ ನಾನು ಒಳ್ಳೆ ಕಥೆ ಸಿಗದ ಕಾರಣ, ಮುಂದೂಡಿಕೊಂಡು ಬಂದಿದ್ದೆ. ಇಂದಿನ ದಿನಗಳಲ್ಲಿ ಉತ್ತಮ ಕಥೆಗಳ ಕೊರತೆಯಿದೆ. ಆದರೆ, ತರುಣ್ ಈ ಕಥೆ ಹೇಳಿದಾಗ ಇಷ್ಟವಾಗಿ ಒಪ್ಪಿಕೊಂಡೆ’ ಎಂದರು. ಜತೆಗೆ ದರ್ಶನ್ ರಾಕ್‌ಲೈನ್ ವೆಂಕಟೇಶ್ ಅವರನ್ನು ಪ್ರೀತಿಯಿಂದ ತಾತ ಎನ್ನುವ ಹಾಗೂ ರಾಕ್‌ಲೈನ್ ದರ್ಶನ್‌ರನ್ನು ಮೊಮ್ಮಗನೇ ಎಂದು ಕರೆಯುವ ಬಗ್ಗೆ ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net