ಐಶಾರಾಮಿ ಕಾರು ಬಿಟ್ಟು ಟ್ರಾಕ್ಟರ್​ ಏರಿದ ದರ್ಶನ್​

Darshan Final
Published on

ದರ್ಶನ್​ ಅವರ ಕಾರ್​ ಕಲೆಕ್ಷನ್​ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ದೇಶ-ವಿದೇಶದ ಹಲವು ಐಶಾರಾಮಿ ಕಾರುಗಳು ಅವರ ಶೆಡ್​ನಲ್ಲಿದೆ. ಈ ಕಾರುಗಳಲ್ಲಿ ಅವರು ಆಗಾಗ ಊರೂರು ಸುತ್ತುವುದಿದೆ. ಇಷ್ಟೆಲ್ಲಾ ಐಷಾರಾಮಿ ಕಾರುಗಳಿರುವಾಗ, ಅದನ್ನೆಲ್ಲಾ ಬಿಟ್ಟು ಟ್ರಾಕ್ಟರ್​ ಏರಿ ರೌಂಡು ಹೊಡೆದು ಬಂದಿದ್ದಾರೆ.

ಹೌದು, ಲಾಕ್​ಡೌನ್​ ಘೋಷಣೆಯಾದಾಗಿನಿಂದ ಮೈಸೂರಿನಲ್ಲಿ ತಮ್ಮ ಫಾರ್ಮ್​ ಹೌಸ್​ನಲ್ಲಿ ಬೀಡುಬಿಟ್ಟಿರುವ ದರ್ಶನ್​, ಕೃಷಿಯ ಅಗತ್ಯಕ್ಕೆ ತಕ್ಕಂತೆ ಒಂದು ಟ್ರಾಕ್ಟರ್​ ಖರೀದಿಸಿದ್ದಾರೆ. ಇತ್ತೀಚೆಗೆ ಆ ಟ್ರಾಕ್ಟರ್​ನಲ್ಲಿ ಮೈಸೂರಿನ ಹೊರವಲಯದಲ್ಲಿ ಒಂದು ರೌಂಡು ಹೋಗಿದ್ದಾರೆ. ದರ್ಶನ್​ ಅವರ ಜತೆಗೆ, ಅವರ ತೋಟದ ಕೆಲಸ ಮಾಡುವ ಹುಡುಗರು ಸಹ ಇದ್ದಾರೆ.

ಕನ್ನಡ ಚಿತ್ರರಂಗದಲ್ಲಿ 'ಚಾಲೆಂಜಿಂಗ್​ ಸ್ಟಾರ್​' ಎಂದು ಹೆಸರು ಮಾಡಿರುವ ದರ್ಶನ್​, ಅತ್ಯಂತ ಸರಳವಾಗಿ ಟ್ರಾಕ್ಟರ್​ನಲ್ಲಿ ಪ್ರಯಾಣ ಮಾಡುವುದನ್ನು ಅವರ ಅಭಿಮಾನಿಗಳು ವಿಡಿಯೋ ಮಾಡಿದ್ದು, ಆ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ಲಾಕ್​ಡೌನ್​ಗೂ ಮುನ್ನ 'ರಾಜವೀರ ಮದಕರಿನಾಯಕ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು ದರ್ಶನ್​. ಲಾಕ್​ಡೌನ್​ನಿಮದ ಚಿತ್ರೀಕರಣ ಸ್ಥಗಿತಗೊಂಡಿದ್ದು, ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ದರ್ಶನ್​ ಅಭಿನಯದ 'ರಾಬರ್ಟ್​' ಚಿತ್ರ ಸಹ ಬಿಡುಗಡೆಯಾಗುವುದಕ್ಕೆ ಸಿದ್ಧವಿದ್ದು, ಪರಿಸ್ಥಿತಿ ತಿಳಿಯಾದ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net