ದೀಪಾವಳಿ ಸಂಭ್ರಮದ ನಡುವೆ ಮಾಂಸಾಹಾರ ಸೇವನೆ: ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಭಾರಿ ಅಸಮಾಧಾನ..! Priyanka Chopra

Priyanka Chopra
ದೀಪಾವಳಿ ಸಂಭ್ರಮದ ನಡುವೆ ಮಾಂಸಾಹಾರ ಸೇವನೆ: ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಭಾರಿ ಅಸಮಾಧಾನ..!
Published on: 

ಮುಂಬೈ: ಬಾಲಿವುಡ್ ಹಾಗೂ ಹಾಲಿವುಡ್‌ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಗ್ಲೋಬಲ್​ ನಟಿ ಪ್ರಿಯಾಂಕಾ ಚೋಪ್ರಾ ( Priyanka Chopra ) ಅವರು ದೀಪಾವಳಿ ಸಂಭ್ರಮದ ನಡುವೆಯೇ ಭಾರಿ ಟ್ರೋಲ್​ಗೆ ಗುರಿಯಾಗಿದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪತಿ ನಿಕ್ ಜೋನಾಸ್ ಮತ್ತು ಕುಟುಂಬದೊಂದಿಗೆ ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ ಪ್ರಿಯಾಂಕಾ, ಆ ಸಂಭ್ರಮದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಆದರೆ, ಹಬ್ಬದ ಸಂಭ್ರಮದ ಆಚರಣೆಯ ನಡುವೆ ಮಾಂಸಾಹಾರ ಸೇವನೆ ಮಾಡುತ್ತಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ದೀಪಾವಳಿ ಹಬ್ಬದ ಅಲಂಕಾರ ಮತ್ತು ಖಾದ್ಯಗಳ ಫೋಟೋಗಳ ಜತೆಗೆ ಪ್ರಿಯಾಂಕಾ ಚೋಪ್ರಾ ಸೀಗಡಿ (Prawns) ತಿನ್ನುತ್ತಿರುವ ಚಿತ್ರವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದೀಪಾವಳಿಯಂತಹ ಪವಿತ್ರ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಇರುವ ಶುಭ ದಿನದಂದು ಮಾಂಸಾಹಾರ ಸೇವನೆಯ ಫೋಟೋವನ್ನು ಬಹಿರಂಗವಾಗಿ ಹಂಚಿಕೊಳ್ಳುವುದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ನೆಟ್ಟಿಗರು ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Also Read
ಸೌತ್​ ಬ್ಯೂಟಿ ನಯನತಾರಾಗೆ ಈ ರೀತಿ ಆಗಬಾರದಿತ್ತು... ಲೇಡಿ ಸೂಪರ್ ಸ್ಟಾರ್​ಗೆ ಸಾಲು ಸಾಲು ಆಘಾತ! Nayanthara
Priyanka Chopra

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮಿಷ್ಟದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದರೂ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲಿ ಆಯಾ ಸಂಪ್ರದಾಯಗಳಿಗೆ ಕನಿಷ್ಠ ಗೌರವ ನೀಡಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖಿಸಿ, ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ನೆಟ್ಟಿಗರಿಂದ ಪ್ರಿಯಾಂಕಾ ಪೋಸ್ಟ್‌ಗೆ ತೀವ್ರ ತರಹದ ಟೀಕೆಗಳು ವ್ಯಕ್ತವಾಗುತ್ತಿದ್ದು, "ದೀಪಾವಳಿ ಹಬ್ಬದ ದಿನ ಯಾರಾದರೂ ಮಾಂಸಾಹಾರ ತಿನ್ನುತ್ತಾರೆಯೇ?", "ದೀಪಾವಳಿಯಂದು ಸೀಗಡಿ ಸೇವನೆ ಮಾಡುವುದು ಯಾವುದೇ ರೀತಿಯಲ್ಲೂ ಸರಿಯಲ್ಲ", ಹಾಗೂ "ಹಬ್ಬಕ್ಕೆ ಹಣತೆಗಳನ್ನು ಬೆಳಗಿಸುವ ಬದಲು ಮೇಣದಬತ್ತಿಗಳನ್ನು ಏಕೆ ಹಚ್ಚಿದ್ದೀರಿ?" ಎಂದೆಲ್ಲ ಸಾಲು ಸಾಲು ಕಾಮೆಂಟ್‌ಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ಇದಷ್ಟೇ ಅಲ್ಲದೆ, ಪ್ರಿಯಾಂಕಾ ಚೋಪ್ರಾ ಅವರು ಆಚರಣೆಯ ಸಮಯದಲ್ಲಿ ಧರಿಸಿದ್ದ ಉಡುಪು ಮತ್ತು ಮಾಡಿಕೊಂಡಿದ್ದ ಹೇರ್‌ಸ್ಟೈಲ್ ಕುರಿತಾಗಿಯೂ ಕೆಲವರು ನೆಗೆಟಿವ್​ ಕಾಮೆಂಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ವಾಸ್ತವವಾಗಿ, ವಿದೇಶದಲ್ಲೇ ನೆಲೆಸಿದ್ದರೂ ಪ್ರಿಯಾಂಕಾ ಚೋಪ್ರಾ ಭಾರತೀಯ ಸಂಸ್ಕೃತಿ ಮತ್ತು ಹಬ್ಬ-ಹರಿದಿನಗಳನ್ನು ಕುಟುಂಬ ಸಮೇತ ಅತ್ಯಂತ ಶ್ರದ್ಧೆಯಿಂದ ಆಚರಿಸುವ ನಟಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಮಗಳು ಮಾಲ್ಟಿ ಜತೆ ವಿಜಯದಶಮಿ/ದಸರಾ ಆಚರಿಸಿದ ಫೋಟೋಗಳನ್ನು ಹಾಗೂ ಕನ್ಯಾ ಪೂಜೆಯ ಭಾಗವಾಗಿ ಪತಿ ನಿಕ್ ಜೋನಾಸ್, ಮಗಳ ಪಾದಗಳನ್ನು ತೊಳೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡು ಮೆಚ್ಚುಗೆ ಗಳಿಸಿದ್ದರು. ಆದಾಗ್ಯೂ, ಪ್ರಸ್ತುತ ದೀಪಾವಳಿ ಆಚರಣೆಯ ಈ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿವಾದ ಮತ್ತು ಸೈಬರ್ ದಾಳಿಗೆ ಕಾರಣವಾಗಿದೆ.

Also Read
ರಾವಣನ ಅವತಾರದಲ್ಲಿ ಮಕ್ಕಳ ಜತೆ ಯಶ್ ಸೆಲ್ಫಿ! ದೀಪಾವಳಿ ಫೋಟೋ ಹಂಚಿಕೊಂಡ ರಾಕಿಂಗ್ ಸ್ಟಾರ್‌ಗೆ ಫ್ಯಾನ್ಸ್ ಫಿದಾ...ramayana rash
Priyanka Chopra

ಇನ್ನು ಪ್ರಿಯಾಂಕಾ ಚೋಪ್ರಾ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್​ ಮಾಡಲು ತಯಾರಿ ನಡೆಸುತ್ತಿದ್ದಾರೆ. ಭಾರತೀಯ ಸಿನಿಮಾರಂಗದ ದಿಗ್ಗಜ ನಿರ್ದೇಶಕ ಎಸ್. ಎಸ್. ರಾಜಮೌಳಿ ಹಾಗೂ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ 'ವಾರಣಾಸಿ' ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟೈಮ್ ಟ್ರಾವೆಲ್​ ಹಾಗೂ ಭಾರಿ ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಬೃಹತ್ ಸಿನಿಮಾವು 2027ರ ಏಪ್ರಿಲ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ, (ಏಜೆನ್ಸೀಸ್​).