Yash Poses With His Children In Ravana Avatar: ನಟ ರಾಕಿಂಗ್ ಸ್ಟಾರ್ ಯಶ್ ಈ ಬಾರಿಯ ದೀಪಾವಳಿಯನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಗಳು ಆಯ್ರಾ ಹಾಗೂ ಮಗ ಯಥರ್ವ್ ಜೊತೆಗಿನ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಯಶ್ ಹಂಚಿಕೊಂಡಿರುವ ಫೋಟೋಗಳಲ್ಲಿ ಇಡೀ ಕುಟುಂಬ ಒಟ್ಟಿಗೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದೆ. ಮತ್ತೊಂದು ಫೋಟೋದಲ್ಲಿ ರಾವಣನ ವೇಷದಲ್ಲಿರುವ ಯಶ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಅವರ ಮಕ್ಕಳು ಕೂಡ ರಾವಣನ ಮುಖಭಾವವನ್ನು ಅನುಕರಿಸಿರುವುದು ವಿಶೇಷವಾಗಿದೆ.
ಈ ಫೋಟೋಗಳನ್ನು ಹಂಚಿಕೊಂಡ ಯಶ್, ನಿಮ್ಮೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ನೀವು ತೋರಿದ ಪ್ರೀತಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ನಟ ಯಶ್ ಅವರು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಕ್ಟೋಬರ್ 27ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರದರ್ಶನದ ಬಳಿಕ ತಮ್ಮ ಮಗ ಯಥರ್ವ್ ಸಿನಿಮಾವನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸಿದ ಎಂಬುದನ್ನು ಯಶ್ ಹಂಚಿಕೊಂಡಿದ್ದರು. ಸಿನಿಮಾದಲ್ಲಿ ರಾವಣ ಜಟಾಯುವನ್ನು ಸಂಹರಿಸುವ ದೃಶ್ಯವನ್ನು ಕಂಡು ಏಳು ವರ್ಷದ ಯಥರ್ವ್ ಭಾವುಕನಾಗಿದ್ದನಂತೆ. ತಂದೆಯೇ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಆ ದೃಶ್ಯವನ್ನು ಮಗ ಒಪ್ಪಿಕೊಳ್ಳಲಿಲ್ಲ. ಸಿನಿಮಾದಲ್ಲಿ ನಡೆದ ಘಟನೆ ಎಂಬುದಕ್ಕಿಂತಲೂ ಜಟಾಯುವಿನ ನೋವಿನ ಬಗ್ಗೆ ಮಗ ಹೆಚ್ಚು ಯೋಚಿಸಿದ್ದ ಎಂದು ಯಶ್ ವಿವರಿಸಿದ್ದರು.
ಮಕ್ಕಳು ಜೀವನದ ಮೌಲ್ಯಗಳು, ಪರಸ್ಪರ ಗೌರವ ಮತ್ತು ಒಳ್ಳೆಯ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳುತ್ತಿರುವ ವಯಸ್ಸು ಇದು. ಮಗನ ಪ್ರತಿಕ್ರಿಯೆ ಕಂಡು ತಮಗೆ ಆಶ್ಚರ್ಯವಾಯಿತು ಎಂದು ಯಶ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಚಿತ್ರಮಂದಿರದಲ್ಲಿ ಮಗ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದ್ದೂ ವಿಶೇಷವಾಗಿತ್ತು, ( ಏಜೆನ್ಸೀಸ್).