ಹರಿಪ್ರಿಯಾ-ವಸಿಷ್ಠ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್​ ಅಂತೆ … ಯಾರು ಈ ಕ್ರಿಸ್ಟಲ್​?

Vasishta Simha - Haripriya 2
Published on

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಮುಗಿದಿದೆ. ಇನ್ನು, ಇಬ್ಬರೂ 2023ರ ಫೆಬ್ರವರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ. ಎಲ್ಲ ಸರಿ, ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಎಂಬ ವಿಷಯ ಮಾತ್ರ ರಹಸ್ಯವಾಗಿಯೇ ಇತ್ತು. ಈಗ ಆ ವಿಷಯದ ಬಗ್ಗೆ ಹರಿಪ್ರಿಯಾ ಮೊದಲ ಬಾರಿಗೆ ಮಾತನಾಡಿದ್ದು, ಅವರಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್​ ಎಂದು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಈ ಕ್ರಿಸ್ಟಲ್​ ಯಾರು ಗೊತ್ತಾ? ಒಂದು ನಾಯಿಮರಿ. ಈ ವಿಷಯವನ್ನು ಖುದ್ದು ಹರಿಪ್ರಿಯಾ ಹೇಳಿಕೊಂಡಿದ್ದಾರೆ. ತಮ್ಮ ಲವ್​ಸ್ಟೋರಿ ಶುರುವಾಗಿದ್ದು ಹೇಗೆ ಎಂಬುದನ್ನು ಒಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.

ವಿಷಯವೇನೆಂದರೆ, ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಗಳನ್ನು ಸಾಕಿದ್ದರು. ಆದರೆ, ಲಕ್ಕಿ ಕಾರಣಾಂತರಗಳಿಂದು ಸತ್ತು ಹೋಯಿತು. ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿ ಆಯಿತಂತೆ. ಈ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರಂತೆ. ಹ್ಯಾಪಿ ಮತ್ತು ಕ್ರಿಸ್ಟಲ್​ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಹಿಡಿಯಿತಂತೆ. ಕ್ರಿಸ್ಟಲ್​ ಯಾವಾಗಲೂ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡುತ್ತಿದ್ದರಿಂದ ಹ್ಯಾಪಿಗೂ ಸಿಟ್ಟು ಬರುತ್ತಿತ್ತಂತೆ. ಯಾರನ್ನು ಬೇಕಾದರೂ ಫ್ರೆಂಡ್​ ಮಾಡಿಕೊಳ್ಳುವ ಗುಣ ಇರುವ ಕ್ರಿಸ್ಟಲ್​, ಕ್ರಮೇಣ ಹ್ಯಾಪಿ ಜೊತೆಗೂ ಫ್ರೆಂಡ್​ಶಿಪ್​ ಬೆಳೆಸಿಕೊಂಡನಂತೆ. ಈಗ ಅವರಿಬ್ಬರೂ ಜತೆಯಲ್ಲೇ ಇರುತ್ತಾರೆ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಒಂದು ಸೀಕ್ರೆಟ್​ ಹೇಳುತ್ತೀನಿ ಎಂದಿರುವ ಅವರು, 'ಸಿಂಹ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಅವನು ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ಥ್​ ಮಾರ್ಕ್​ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್​ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ ‘ಎವರು’ ಚಿತ್ರದ ಕನ್ನಡ ರೀಮೇಕ್​ನಲ್ಲಿ ನಟಿಸಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net