'ವರಾಹ ರೂಪಂ' ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್​ ಆದೇಶ

Kantara 1
Published on

ಕೋಜಿಕ್ಕೋಡ್​: ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ್ದು, ಇದರಿಂದಾಗಿ ಚಿತ್ರಮಂದಿರಗಳಲ್ಲಿ ಹಾಡನ್ನು ಪ್ರದರ್ಶಿಸುವಂತಿಲ್ಲ.

ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ನಾಲ್ಕನೆಯ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಚಿತ್ರದ 'ವರಾಹ ರೂಪಂ' ಹಾಡನ್ನು ಮಲಯಾಳಂನ ಜನಪ್ರಿಯ ಬಾಂಡ್​ ಥಾಯ್ಕುಡಂ ಬ್ರಿಡ್ಜ್​ ರೂಪಿಸಿದ್ದ 'ನವರಸಂ' ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​, ವಾದವನ್ನು ತಳ್ಳಿ ಹಾಕುವುದರ ಜತೆಗೆ, 'ನವರಸಂ' ಹಾಡಿನಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

ಈ ಸಂಬಂಧ, ಥಾಯ್ಕುಡಂ ಬ್ರಿಡ್ಜ್​ ತಂಡದವರು, 'ಕಾಂತಾರ' ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿ, ಕೇಸ್​ ಹಾಕುವುದಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದ್ದರು. 'ಎರಡೂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಹಾಡಿನ ಹಕ್ಕುಗಳನ್ನು ಕುರಿತಂತೆ ಚಿತ್ರತಂಡದವರು ನಮಗೆ ಯಾವುದೇ ಕ್ರಿಡಿಟ್​ ನೀಡಿಲ್ಲ ಹಾಗೂ ಈ ಹಾಡನ್ನು ಸ್ವಂತ ಸೃಷ್ಟಿ ಎಂಬಂತೆ ಬಳಸಿಕೊಳ್ಳಲಾಗಿದೆ' ಎಂದು ಪೋಸ್ಟ್​ ಮಾಡುವುದರ ಜತೆಗೆ, ಈ ಸಂಬಂಧ ಕೋರ್ಟ್​ನಲ್ಲಿ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಸಲ್ಲಿಕೆ ಮಾಡಿತ್ತು.

ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್​ ‘ವರಾಹ ರೂಪಂ ...’ ಹಾಡಿನ ಮೇಲೆ ನಿರ್ಬಂಧ ಹೇರಿದೆ. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ ...’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿದೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಈ ಹಾಡು ಬರಲಿದ್ದು, ಇದೀಗ ಈ ಹಾಡಿಗೆ ಕತ್ತರಿ ಹಾಕುವ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.

ಇದರಿಂದ ಚಿತ್ರತಂಡಕ್ಕೆ ಸಾಕಷ್ಟು ಹಿನ್ನೆಡೆಯಾಗಿದ್ದು, ಪೂರ್ತಿ ಸ್ಪಷ್ಟತೆ ಸಿಗುವವರೆಗೆ ಹಾಡನ್ನು ಕತ್ತಿರಸಬೇಕಿದೆ. ಚಿತ್ರತಂಡದ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net