ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

film
Published on

ಬೆಂಗಳೂರು: ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಕರೊನಾ 2ನೇ ಅಲೆ ಚಿತ್ರರಂಗದ ಮೇಲೂ ಕರಿನೆರಳನ್ನು ಬೀಳಿಸಿದೆ. ಸೀಮಿತ ಜನರನ್ನಷ್ಟೇ ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡೇ ಶೂಟಿಂಗ್​ ಆರಂಭಿಸಿದ್ದ ಚಿತ್ರತಂಡಗಳಿಗೆ, ಸೋಮವಾರ ಘೋಷಿಸಲಾದ ಲಾಕ್​ಡೌನ್​ ಆದೇಶ ಮತ್ತೆ ಇಕ್ಕಟ್ಟಿಗೆ ತಳ್ಳಿದೆ. ನಿರ್ಮಾಪಕರ ವಲಯದಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

ದಿನೇದಿನೆ ಕೋವಿಡ್​ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಚಿತ್ರತಂಡಗಳು ಸ್ವಯಂ ಬಂದ್​ ಮಾಡಿಕೊಂಡು, ಶೂಟಿಂಗ್​ ಸ್ಥಗಿತಗೊಳಿಸಿದ್ದವು. ಮತ್ತೊಂದಷ್ಟು ತಂಡಗಳು ಬೆರಳಣಿಕೆಯಷ್ಟು ಜನರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡುತ್ತಿದ್ದವು. ಇದೀಗ ಲಾಕ್​ಡೌನ್​ ಪರಿಣಾಮ ನಷ್ಟದ ಭೀತಿ ಅನುಭವಿಸಬೇಕಾಗಿದೆ.

ಚಿತ್ರರಂಗದ ಈ ಸಮಸ್ಯೆ ಬಗ್ಗೆ ನಿರ್ಮಾಪಕ ಕೆ. ಮಂಜು ಪ್ರತಿಕ್ರಿಯಿಸಿದ್ದು, "ಕಳೆದ ವರ್ಷದಿಂದ ಚಿತ್ರರಂಗ ನಷ್ಟದಲ್ಲಿದೆ. ಆಗಲೇ ನಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಕೋಟ್ಯಂತರ ರೂ. ಸಾಲ ಮಾಡಿ, ಸಿನಿಮಾ ಮಾಡಿದ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ. ಚಿತ್ರರಂಗದಲ್ಲಿ ಶೇ.10ರಿಂದ 15 ಕಾಮಿರ್ಕರು, ಕಲಾವಿದರು ಚೆನ್ನಾಗಿದ್ದಾರೆ. ಇನ್ನುಳಿದ ಶೇ. 85 ಮಂದಿ ಕೂಲಿ ಮಾಡಿದರಷ್ಟೇ ನಿತ್ಯದ ಸಂಪಾದನೆ. ಹಾಗಾಗಿ ಆದಷ್ಟು ಬೇಗ ಚಿತ್ರರಂಗದ ಬಗ್ಗೆಯೂ ಸರ್ಕಾರ ಕಣ್ತೆರೆಯಲಿ' ಎಂದು ಒತ್ತಾಯಿಸಿದ್ದಾರೆ.

ಕಿರುತೆರೆ ಶೂಟಿಂಗ್​ಗೂ ಬ್ರೇಕ್​

ಕಿರುತೆರೆಯಲ್ಲಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಬ್ರೇಕ್​ ಬಿದ್ದಿದೆ. ಪ್ರತಿ ರಾತ್ರಿ ಎಲ್ಲ ವಾಹಿನಿಗಳಲ್ಲಿ 30ಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸಮಯದ ಅಭಾವದಿಂದಾಗಿ ಬಹಳಷ್ಟು ಧಾರಾವಾಹಿಗಳು 5&10ರಿಂದ ಕಂತುಗಳ ಬ್ಯಾಕಪ್​ ಬಿಟ್ಟರೆ, ಮಿಕ್ಕಂತೆ ಹೆಚ್ಚುವರಿ ಕಂತುಗಳ ಚಿತ್ರೀಕರಣ ಮಾಡಿಟ್ಟುಕೊಂಡಿರುವುದು ಕಷ್ಟ. ಹಾಗಾಗಿ, ಮುಂದಿನ ಒಂದು ವಾರ ಎಲ್ಲ ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರವಾಗಲಿದ್ದು, ಆ ನಂತರ ಹಳೆಯ ಕಂತುಗಳ ಮರುಪ್ರಸಾರ ಸಾಧ್ಯತೆ ಹೆಚ್ಚಿದೆ. ಧಾರಾವಾಹಿಯಷ್ಟೇ ಅಲ್ಲ, ರಿಯಾಲಿಟಿ ಶೋಗಳ ಹಳೆಯ ಕಂತುಗಳಷ್ಟೇ ಪ್ರಸಾರವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net