ಸ್ಟಾರ್ ಮಕ್ಕಳು ಬೆಂದ ಮೊಟ್ಟೆಗಳಂತೆ; ಮತ್ತೆ ಬಾಲಿವುಡ್ ಮಂದಿ ಕಾಲೆಳೆದ ಕಂಗನಾ!

Kangana
Published on

ಕಂಗನಾ ರಣಾವತ್ ತಮ್ಮ ಅದ್ಭುತ ನಟನೆಯಿಂದ ಎಷ್ಟು ಸುದ್ದಿ ಮಾಡಿದ್ದಾರೋ, ವಿವಾದಗಳಿಂದಲೂ ಆಗಾಗ ಅಷ್ಟೇ ಸದ್ದು ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ಬಾಲಿವುಡ್ ಚಿತ್ರಗಳನ್ನು ದಕ್ಷಿಣದ ಸಿನಿಮಾಗಳಿಗೆ ಹೋಲಿಸಿ ಬೆಂಡೆತ್ತಿದ್ದರು ಕಂಗನಾ. ಈಗ ಅವರು ನೆಪೋಟಿಸಂ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದು, ಬಾಲಿವುಡ್ ಸ್ಟಾರ್ ಮಕ್ಕಳ ಕಾಲೆಳೆದಿದ್ದಾರೆ. ‘ಬಾಲಿವುಡ್ ಸ್ಟಾರ್​ಗಳ ಮಕ್ಕಳು ಓದಲು ವಿದೇಶಕ್ಕೆ ಹೋಗುತ್ತಾರೆ. ಕೇವಲ ಇಂಗ್ಲೀಷ್​ನಲ್ಲಷ್ಟೇ ಮಾತನಾಡುತ್ತಾರೆ. ಹಾಲಿವುಡ್ ಸಿನಿಮಾಗಳನ್ನಷ್ಟೇ ನೋಡುತ್ತಾರೆ. ಊಟ ಮಾಡಲು ಫೋರ್ಕ್, ಚಾಕು ಬಳಸುತ್ತಾರೆ. ಅವರ ಶೈಲಿಯೇ ವಿಭಿನ್ನವಾಗಿರುತ್ತದೆ. ಅವರು ಅಭಿಮಾನಿಗಳ ಜತೆ ಕನೆಕ್ಟ್ ಆಗೋದಾದರೂ ಹೇಗೆ ಹೇಳಿ? ನಾನು ಅವರನ್ನು ಟ್ರೋಲ್ ಮಾಡುತ್ತಿಲ್ಲ. ಆದರೆ, ಅವರು ನೋಡಲು ಬೆಂದ ಮೊಟ್ಟೆಯಂತೆ ವಿಚಿತ್ರವಾಗಿರುತ್ತಾರೆ...’ ಎಂದು ಬಿಟೌನ್ ಸ್ಟಾರ್ ಮಕ್ಕಳನ್ನು ಅಪಹಾಸ್ಯ ಮಾಡಿದ್ದಾರೆ ಕಂಗನಾ.

‘ಪುಷ್ಪ’ ಚಿತ್ರದ ನಾಯಕ ಅಲ್ಲು ಅರ್ಜುನ್ ಪಾತ್ರವನ್ನು ಹೊಗಳಿರುವ ಕಂಗನಾ, ‘‘ಪುಷ್ಪ’ ಪಾತ್ರವನ್ನೇ ನೋಡಿ. ಆ ಪಾತ್ರ ನಮಗೆ ಅಪರಿಚಿತ ಎಂದನಿಸುವುದಿಲ್ಲ. ಪ್ರತಿಯೊಬ್ಬ ಕೂಲಿ ಕಾರ್ವಿುಕನೂ ಆ ಪಾತ್ರಕ್ಕೆ ಕನೆಕ್ಟ್ ಆಗಬಹುದು. ಇವತ್ತಿನ ನಮ್ಮ ಯಾವ ಹೀರೋ ಕೂಲಿ ಕಾರ್ವಿುಕನಂತೆ ಕಾಣಿಸಬಲ್ಲ ಹೇಳಿ? ಅದು ಸಾಧ್ಯವಿಲ್ಲ. ದಕ್ಷಿಣದ ಸ್ಟಾರ್​ಗಳ ಸಂಸ್ಕೃತಿ, ಸರಳತೆಗಳೇ ಅವರ ಯಶಸ್ಸಿಗೆ ಕಾರಣ. ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರೇರೇಪಿತರಾಗುವುದಿಲ್ಲ. ನಮ್ಮ ದೇಶದ ಜನರೊಂದಿಗೆ ಕನೆಕ್ಟ್ ಆಗುವುದು ಮುಖ್ಯ’ ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಕಂಗನಾ ನಟಿಸಿರುವ ಆಕ್ಷನ್ ಥ್ರಿಲ್ಲರ್ ‘ಧಾಕಡ್’ ಇದೇ ಶುಭ ಶುಕ್ರವಾರ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net