‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಅಂತಿದ್ದಾರೆ ‘ಟಗರು’ ಸರೋಜ

Triveni Final
Published on

‘ಟಗರು’ ಚಿತ್ರದಲ್ಲಿ ಸಿಕ್ಕಾಪಟ್ಟೆ ಜನಪ್ರಿಯರಾದವರು ಎಂದರೆ, ಅದು ತ್ರಿವೇಣಿ ರಾವ್. ಡಾಲಿಯ ಲವ್ವರ್ ಕಾನ್ಸ್‌ಟೇಬಲ್ ಸರೋಜ ಪಾತ್ರ ಮಾಡಿ, ಎಲ್ಲರ ಗಮನ ಸೆಳೆದ ಅವರು, ನಂತರ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಚಿತ್ರದಲ್ಲೂ ನಟಿಸಿದ್ದಾರೆ.ಈಗ ಅವರು ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಎಂಬ ಚಿತ್ರಕ್ಕೆ ಹೀರೋಯಿನ್ ಆಗಿದ್ದಾರೆ.

ಹೌದು, ತ್ರಿವೀಣಿ ಕೃಷ್ಣ ಇದೀಗ ನಾಯಕಿಯಾಗಿದ್ದು, ಸದ್ದಿಲ್ಲದೆ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಶುರುವಾಗಿತ್ತು. ಇನ್ನು ಲಾಕ್‌ಡೌನ್‌ಗೂ ಮುನ್ನವೇ ಚಿತ್ರೀಕರಣ ಮುಗಿದಿತ್ತು. ಇನ್ನೇನು ಚಿತ್ರದ ಡಬ್ಬಿಂಗ್ ಕೆಲಸ ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಶುರುವಾಯಿತು.

ಹಾಗಾಗಿ ಕಳೆದ ಎರಡು ತಿಂಗಳಿನಿಂದ ಸುಮ್ಮನಿದ್ದ ಚಿತ್ರತಂಡ, ಇದೀಗ ಡಬ್ಬಿಂಗ್ ಮುಗಿಸಿದೆ. ಸದ್ಯದಲ್ಲೇ ಚಿತ್ರದ ರೀ-ರೆಕಾರ್ಡಿಂಗ್ ಕೆಲಸಗಳನ್ನು ಮುಗಿಸಿ, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದೆ.

‘ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರವನ್ನು ಜನನ ಫಿಲಂಸ್ ಬ್ಯಾನರ್‌ನಡಿ ಪ್ರಶಾಂತ್ ಬಿ.ಜೆ ನಿರ್ಮಾಣ ಮಾಡಿದ್ದಾರೆ. ಇನ್ನು ರತ್ನ ತೀರ್ಥ ಈ ಚಿತ್ರದ ಡೈರೆಕ್ಟರ್. ಅವರು ಬರೀ ನಿರ್ದೇಶಕರಷ್ಟೇ ಅಲ್ಲ, ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರು ರಚಿಸಿದ್ದಾರೆ. ಇನ್ನು ಚಿತ್ರಕ್ಕೆ ರಾಜೇಂದ್ರನ್ ಅವರ ಛಾಯಾಗ್ರಹಣ ಮತ್ತು ವಿಜಯ್‌ರಾಜ್ ಅವರ ಸಂಗೀತ ಇದೆ.

ತ್ರಿವೇಣಿ ಕೃಷ್ಣ ಎದುರು ನಾಯಕನಾಗಿ ಶೌರ್ಯ ನಟಿಸಿದ್ದು, ಮಿಕ್ಕಂತೆ ಶಂಕರ್ ಅಶ್ವತ್ಥ್, ರಘು ರಾಮನಕೊಪ್ಪ, ‘ಕುರಿ ಬಾಂಡ್’ ರಂಗ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net