

ಲಾಲೆಟ್ಟನ್ ಎಂದೇ ಜನಪ್ರಿಯರಾಗಿರುವ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅವರ ಹುಟ್ಟುಹಬ್ಬ ಇಂದು. 1960ರ ಮೇ 21ರಂದು ಜನಿಸಿದ ಈ ಅಭಿಜಾತ ಕಲಾವಿದ, ಇಂದು 60 ಮುಗಿಸಿ, 61ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಬಹುಶಃ ಲಾಕ್ಡೌನ್ ಇಲ್ಲದಿದ್ದರೆ ಮೋಹನ್ ಲಾಲ್ ಅವರ ಹುಟ್ಟುಹಬ್ಬ ಇನ್ನಷ್ಟು ಭರ್ಜರಿಯಾಗಿ ಆಗುತಿತ್ತೇನೋ? ಹಾಗಂತ ಸಂಭ್ರಮಕ್ಕೇನೂ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಲಾಲ್ ಅವರ ಅಭಿಮಾನಿಗಳು ಕೆಲವು ದಿನಗಳಿಂದ ಅಭಿಯಾನ ನಡೆಸುತ್ತಿದ್ದು, ಇಂದು ಬೆಳಿಗ್ಗೆಯಿಂದಲೇ ಲಾಲ್ಗೆ ಶುಭಾಶಯ ಕೋರುತ್ತಲೇ ಇದ್ದಾರೆ. ಬರೀ ಅವರ ಅಭಿಮಾನಿಗಳಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಮೋಹನ್ ಲಾಲ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಅದರಲ್ಲೂ ಹಿರಿಯ ನಟ ಕಮಲ್ ಹಾಸನ್, ‘ನಿಮನ್ಮ ನೋಡಿದ್ರೆ ನಂಗೆ ಹೊಟ್ಟೆ ಉರಿ ಆಗುತ್ತೆ ...’ ಅಂತ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಮಿಸ್ಟರ್ ಮೋಹನ್ ಲಾಲ್. ನಿಮ್ಮ ಮೊದಲ ಚಿತ್ರದಿಂದಲೇ ನಿಮ್ಮನ್ನ ಇಷ್ಟಪಟ್ಟವನು ನಾನು. ನಿಮ್ಮ ಕ್ವಾಲಿಟಿ ಕೆಲಸ ನೋಡುತ್ತಿದ್ದರೆ, ನನಗೆ ನಿಜಕ್ಕೂ ಹೊಟ್ಟೆ ಉರಿ ಆಗುತ್ತದೆ. ನಿಮ್ಮ ಕಾಲೆಳೆಯುವವರು ಅಷ್ಟೊಂದು ಜನ ಇದ್ದರೂ, ನೀವು ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದೀರಿ. ನಿಮ್ಮ ಜತೆಗೆ ಕೆಲಸ ಮಾಡಿದ ಮೇಲೆ, ನೀವು ನನಗೆ ಇನ್ನಷ್ಟು ಇಷ್ಟವಾದಿರಿ. ಲಾಂಗ್ ಲಿವ್ ಮೈ ಯಂಗರ್ ಬ್ರದರ್’ ಎಂದು ಕಮಲ್ ಹಾಸನ್ ಶುಭ ಕೋರಿದ್ದಾರೆ. ಕಮಲ್ ಹಾಸನ್ ಅಷ್ಟೇ ಅಲ್ಲ, ಪೃಥ್ವಿರಾಜ್, ಮಂಜು ವಾರಿಯರ್, ಗಾಯಕಿ ಚಿತ್ರ ಸೇರಿದಂತೆ ಹಲವರು ಮೋಹನ್ ಲಾಲ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಅಂಬರೀಷ್ ಬದುಕಿನ ಪುಟಗಳ ಪ್ರಶ್ನೋತ್ತರ
ಮೋಹನ್ ಲಾಲ್ ಬರೀ ಮಲಯಾಳಂನಲ್ಲಿ ಮಾತ್ರ ಜನಪ್ರಿಯರಲ್ಲ. ಬೇರೆ ಭಾಷೆಗಳಲ್ಲೂ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡದಲ್ಲೂ ಎರಡು ಚಿತ್ರಗಳಲ್ಲಿ ಮೋಹನ್ ಲಾಲ್ ನಟಿಸಿದ್ದು ನೆನಪಿರಬಹುದು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಲವ್’ ಚಿತ್ರದಲ್ಲಿ ಮೋಹನ್ ಲಾಲ್, ಟ್ಯಾಕ್ಸಿ ಡ್ರೈವರ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಪುನೀತ್ ರಾಜಕುಮಾರ್ ಅಭಿನಯದ ‘ಮೈತ್ರಿ’ ಚಿತ್ರದಲ್ಲೂ ಮೋಹನ್ ಲಾಲ್ ಅಭಿನಯಿಸಿದ್ದರು.