ಬಣ್ಣ ಬದಲಾಗಿದೆ!

banna badlu
Published on

ಬೆಂಗಳೂರು: ಎರಡು ತಿಂಗಳ ಲಾಕ್​ಡೌನ್ ಮುಗಿಯುತ್ತಾ ಬಂದಿದೆ. ಜನ-ಜೀವನ ಮತ್ತೆ ಗರಿಗೆದರುತ್ತಿದೆ. ಕಿರುತೆರೆಯಲ್ಲಿ ಈಗಾಗಲೇ ಚಿತ್ರೀಕರಣ ಚಟುವಟಿಕೆಗಳು ಸಹ ಪ್ರಾರಂಭವಾಗಿದ್ದು, ಜೂನ್ ಒಂದರಿಂದ ಧಾರಾವಾಹಿಗಳ ಹೊಸ ಕಂತುಗಳು ಸಹ ಪ್ರಸಾರವಾಗಲಿವೆ. ಇದೊಂದು ಹೊಸ ಆರಂಭ ಎಂದು ಕಲರ್ಸ್ ಕನ್ನಡ ವಾಹಿನಿಯು ಪರಿಗಣಿಸಿದ್ದು, ಹೊಸ ಎಪಿಸೋಡುಗಳನ್ನು ಹೊಸ ಬಣ್ಣದಲ್ಲಿ ತೋರಿಸುವುದಕ್ಕೆ ಹೊರಟಿದೆ.

ಹೌದು. ಲಾಕ್​ಡೌನ್ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿರುವ ಕಲರ್ಸ್ ಕನ್ನಡ ವಾಹಿನಿಯು, ಜೂನ್ ಒಂದರಿಂದ ಹೊಸ ಬಣ್ಣದಲ್ಲಿ ವೀಕ್ಷಕರೆದುರು ಬರಲು ಸಿದ್ಧವಾಗಿದೆ. ‘ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ’ ಎಂಬ ಘೋಷವಾಕ್ಯದೊಂದಿಗೆ ಹೊಸ ಪ್ರೋಮೋಗಳನ್ನು ರೂಪಿಸಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಲ್ಲಿ ನಟಿಸುತ್ತಿರುವ ನಟ-ನಟಿಯರೆಲ್ಲಾ, ಬಣ್ಣ ಬಣ್ಣದ ಮಾಸ್ಕುಗಳನ್ನು ಧರಿಸಿ, ನಗುಮುಖದಿಂದ ಓಡಾಡುತ್ತಿರುವ ಈ ಪ್ರೋಮೋಗಳು ವೀಕ್ಷಕರ ಗಮನ ಸೆಳೆದಿದೆ.

ಕಲರ್ಸ್ ವಾಹಿನಿಯು ರೀಲಾಂಚ್ ಆಗುತ್ತಿರುವ ಕುರಿತು ಮಾತನಾಡುವ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್​ನ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್, ‘ಈ ಲಾಕ್​ಡೌನ್​ನ ವಿರಾಮವೂ ಎಲ್ಲರಿಗೂ ತುಸು ನಿಂತು ಯೋಚಿಸಿ, ಹೊಸ ಹುರುಪಿನಲ್ಲಿ ಮುಂದೆ ಸಾಗುವ ಅವಕಾಶವೊಂದನ್ನು ನೀಡಿದೆ. ಹಾಗಾಗಿ ಇದು ಬರೀ ಮುಂದುವರಿಕೆಯಷ್ಟೇ ಅಲ್ಲ, ಹೊಸ ಪಯಣ. ಈ ಬಿಡುವು ಮತ್ತು ಹೊಸ ಪರಿಸ್ಥಿತಿಗಳು ಮನರಂಜನೆಗೂ ಹೊಸ ಬಣ್ಣ ತಂದುಕೊಡುತ್ತದೆ’ ಎನ್ನುತ್ತಾರೆ.

ಇನ್ನು ಲಾಕ್​ಡೌನ್ ನಂತರದ ಸ್ಥಿತಿ-ಗತಿಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವಗಳನ್ನು ನೀಡುತ್ತಿದೆ. ‘ಕಷ್ಟ-ಸುಖ ಎನ್ನುವುದಕ್ಕಿಂತ ಇದೊಂದು ಚಾಲೆಂಜ್’ ಎನ್ನುತ್ತಾರೆ ‘ಮಿಥುನ ರಾಶಿ’ ಧಾರಾವಾಹಿಯ ನಿರ್ವಪಕ ನರಹರಿ. ‘ಹಳೆಯ ತಂತ್ರಜ್ಞರೆಲ್ಲಾ ಊರಿಗೆ ಹೋಗಿದ್ದಾರೆ. ಹೊಸಬರೊಡನೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ’ ಎನ್ನುವುದು ಅವರ ಕಷ್ಟ.

ಇನ್ನು ಕಲರ್ಸ್​ನಲ್ಲಿ ‘ಮಂಗಳಗೌರಿ ಮದುವೆ’ ಮತ್ತು ‘ಗೀತಾ’ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ರಾಮ್, ‘ಕರೊನಾ ಜತೆಗೆ ಸಂಸಾರ ಮಾಡೋದು ತುಂಬಾ ಕಷ್ಟ. ಎಲ್ಲಾ ಸೆಟ್​ನಲ್ಲೂ ನರ್ಸ್​ಗಳಿದ್ದಾರೆ. ಮಾಸ್ಕು ಉಸಿರುಗಟ್ಟಿಸುತ್ತೆ, ಗ್ಲೌಸು ಬೆವರು ಹರಿಸುತ್ತೆ, ಬೆವರಿನಿಂದಾಗಿ ಮೇಕಪ್ ನಿಲ್ತಾ ಇಲ್ಲ. ಏನು ಮಾಡೋದು’ ಎನ್ನುತ್ತಾರೆ ಅವರು.

ಇನ್ನು ‘ಇವಳು ಸುಜಾತಾ’ ಚಿತ್ರೀಕರಣ ಪ್ರಾರಂಭಿಸಿರುವ ಆ ಧಾರಾವಾಹಿಯ ನಿರ್ವಪಕರಾದ ಸೃಜನ್ ಲೋಕೇಶ್, ‘ಆದಷ್ಟು ಬೇಗ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಅನುಮತಿ ನೀಡಿದರೆ, ‘ಮಜಾ ಟಾಕೀಸ್’ ಶುರು ಮಾಡಬಹುದು ಎಂಬ ಉತ್ಸಾಹದಲ್ಲಿದ್ದಾರೆ.

ಒಟ್ಟಾರೆ, ಪ್ರೇಕ್ಷಕರಿಗೆ ಪುನಃ ದೈನಿಕ ಧಾರಾವಾಹಿ ಲೋಕದಲ್ಲಿ ಮುಳುಗುವ ಕಾಲ ಬಂದಿದೆ. ದೈಹಿಕ ಅಂತರವನ್ನು ಪಾಲಿಸುತ್ತಲೇ ಮನಸ್ಸುಗಳನ್ನು ಹತ್ತಿರ ತರುವ ಮನರಂಜನೆಯ ಪರ್ವ ಮತ್ತೆ ತೆರೆದುಕೊಳ್ಳುತ್ತಿದೆ.

ಈಗ ನೆಮ್ಮದಿಯಾಯ್ತು

‘ಎರಡು ತಿಂಗಳಿನಿಂದ ಮೀರಾಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಈಗ ಶೂಟಿಂಗ್ ಶುರುವಾಗಿ ರುವುದರಿಂದ ಥ್ರಿಲ್ ಆಗಿದ್ದೀನಿ’ ಎಂದು ‘ನಮ್ಮನೆ ಯುವರಾಣಿ’ಯ ಮೀರಾ ಪಾತ್ರಧಾರಿ ಅಂಕಿತಾ ಹೇಳಿದರೆ, ‘2 ತಿಂಗಳಾದ ಮೇಲೆ ಮತ್ತೆ ಕೆಲಸ ಮಾಡುತ್ತಿರುವುದು ನೆಮ್ಮದಿ ಅನಿಸುತ್ತಿದೆ’ ಎನ್ನುತ್ತಾರೆ ‘ಕನ್ನಡತಿ’ಯ ಹರ್ಷ ಪಾತ್ರ ನಿರ್ವಹಿಸುತ್ತಿರುವ ಕಿರಣ್ ರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net