

ಬೆಂಗಳೂರು: ಹಲವು ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಸಕ್ರಿಯರಾಗಿರುವ ನಮಿತಾರಾವ್ ಹಾಗೂ ವಿಕ್ರಮ್ ಸೂರಿ ದಂಪತಿಯ ಕನಸಿನ ಕೂಸಾದ 'ಚೌಕಾಬಾರ' ನಾಳೆ (ಮಾ. 10) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಾಗಿ 15 ದಿನಗಳಿಗೆ, ಅಂದರೆ ಮಾ.24ರಂದು ಅಮೆರಿಕದ ಐದು ರಾಜ್ಯಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.
'ಚೌಕಾಬಾರ' ಚಿತ್ರವನ್ನು ವಿಕ್ರಮ್ ಸೂರಿ ನಿರ್ದೇಶನ ಮಾಡಿದರೆ, ನಮಿತಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದರ ಜತೆಗೆ ನವಿನಿರ್ಮಿತಿ ಎಂಬ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಮಿತಾ ರಾವ್ ಜತೆಗೆ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಪ್ರಥಮ ಪಸಾದ್ ಮುಂತಾದವರ ಅಭಿನಯಿಸಿರುವ ಈ ಚಿತ್ರವು ಮಣಿರಾವ್ ಅವರ ಕಾದಂಬರಿಯನ್ನು ಆಧರಿಸಿದ್ದು, ನಟಿ ರೂಪಾ ಪ್ರಭಾಕರ್ ಸಂಭಾಷಣೆ ರಚಿಸಿದ್ದಾರೆ.
'ಚೌಕಾಬಾರ' ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ಸಂಗೀತ, ರವಿರಾಜ್ ಛಾಯಾಗ್ರಹಣವಿದ್ದು, ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಬಿ.ಆರ್. ಲಕ್ಷ್ಮಣ ರಾವ್ ಹಾಡುಗಳನ್ನು ಬರೆದಿದ್ದಾರೆ.