

ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಖ್ಯಾತಿಯ ಚೈತನ್ಯ ನಾಲ್ಕು ಸಿನಿಮಾಗಳನ್ನು ಜತೆಯಾಗಿ ಮಾಡಿದ್ದರು. ಆಟಗಾರದಲ್ಲಿ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಅವರನ್ನು ನಿರ್ದೇಶನ ಮಾಡಿದ್ದರು ಕೆ.ಎಂ. ಚೈತನ್ಯ. ನಂತರದ ದಿನಗಳಲ್ಲಿ ಆಕೆ, ಅಮ್ಮಾ ಐ ಲವ್ ಯೂ ಮತ್ತು ಆದ್ಯ ಚಿತ್ರಗಳು ಅವರ ಜತೆಯಾಟದಲ್ಲಿ ಮೂಡಿಬಂದಿದ್ದವು.
ಇದನ್ನೂ ಓದಿ: ದಾಂಪತ್ಯಕ್ಕೆ ಕಾಲಿಟ್ಟ ನಟಿ ಮಯೂರಿ: ನಡೆಯಿತು ಸರಳ ವಿವಾಹ
ಈ ನಾಲ್ಕು ಚಿತ್ರಗಳಲ್ಲದೆ, ಇವರಿಬ್ಬರ ಜತೆಯಾಟದಲ್ಲಿ ಬೇರೆ ಯಾವುದಾದರೂ ಚಿತ್ರ ಬರಬೇಕಿತ್ತಾ? ಇಂಥ ಪ್ರಶ್ನೆ ಸಹಜ. ನಾಲ್ಕು ಚಿತ್ರಗಳನ್ನು ಒಟ್ಟಿಗೆ ಮಾಡಿದವರು, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವ ಸಾಧ್ಯತೆ ಸಹಜವಾಗಿಯೇ ಇದೆ. ಹಾಗಾಗಿ ಬೇರೆ ಯಾವುದಾದರೂ ಚಿತ್ರದ ಪ್ಲಾನ್ ಇತ್ತಾ ಎಂದರೆ, ಇಲ್ಲ ಎನ್ನುತ್ತಾರೆ ಚೈತನ್ಯ. ಚಿತ್ರದ ಬದಲು ಒಂದು ವೆಬ್ಸೀರೀಸ್ ಮಾಡುವ ಯೋಚನೆ ಇತ್ತು ಎಂಬ ಉತ್ತರ ಅವರಿಂದ ಬರುತ್ತದೆ.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಚೈತನ್ಯ. ಚಿತ್ರ ಮಾಡುವ ಯೋಚನೆ ಇರಲಿಲ್ಲ. ಒಂದು ವೆಬ್ ಸೀರೀಸ್ ಮಾಡುವ ಯೋಚನೆ ನನಗಿತ್ತು. ಅದರಲ್ಲೂ ಸ್ಟಾಂಪ್ ಪೇಪರ್ ಹಗರಣದ ಅಬ್ದುಲ್ ಕರೀಂ ತೆಲಗಿ ಬಗ್ಗೆ ಒಂದು ವೆಬ್ ಸೀರೀಸ್ ಮಾಡುವ ಯೋಚನೆ ಇತ್ತು ಮತ್ತು ಅದಕ್ಕೆ ಸಾಕಷ್ಟು ರೀಸರ್ಚ್ ಸಹ ಮಾಡಿದ್ದೆ. ಈ ವೆಬ್ಸೀರೀಸ್ನಲ್ಲಿ ಚಿರಂಜೀವಿಗೆ ತೆಲಗಿ ಪಾತ್ರ ಮಾಡುವ ಆಸೆ ಇತ್ತು ಎನ್ನುತ್ತಾರೆ ಚೈತನ್ಯ.
ಇದು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಒಂದು ವೆಬ್ ಸೀರೀಸ್ ಮಾಡುವ ಯೋಚನೆ ಇತ್ತು. ಚಿರು ಸಹ ನನ್ನ ಜತೆಗೆ ಇದ್ದುದರಿಂದ, ನಾನು ಮಾಡುತ್ತಿರುವ ರೀಸರ್ಚ್ ಗಮನಿಸುತ್ತಿದ್ದ. ಅವನಿಗೆ ಹಾಗಾಯ್ತಂತೆ, ಹೀಗಾಯ್ತಂತೆ ಅಂತ ಹೇಳುವಾಗ, ಈ ಪಾತ್ರ ಬೇರೆ ಯಾರಿಗಾದರೂ ಕೊಟ್ಟರೆ ಚೆನ್ನಾಗಿರಲ್ಲ, ನಾನೇ ಮಾಡಬೇಕು ಅಂತ ಹೇಳುತ್ತಿದ್ದ. ಅವನಿಗೆ ಕೆಟ್ಟ ವಿಲನ್ ಪಾತ್ರ ಮಾಡಬೇಕು ಎಂಬ ಆಸೆ ಬಹಳ ಇತ್ತು. ಹೀರೋ ಪಾತ್ರಗಳಿಗೆ ಹೆಚ್ಚು ರೇಂಜ್ ಇರುವುದಿಲ್ಲ. ಅವರು ತುಂಬಾ ಒಳ್ಳೆಯವರಾಗಿರುತ್ತಾರೆ. ವಿಲನ್ ಪಾತ್ರಗಳಿಗೆ ಸ್ಕೋಪ್ ಜಾಸ್ತಿ ಇರುವುದರಿಂದ, ವಿಲನ್ ಪಾತ್ರ ಮಾಡಬೇಕು ಎಂಬುದು ಅವನ ಆಸೆಯಾಗಿತ್ತು ಎನ್ನುತ್ತಾರೆ ಚೈತನ್ಯ.
ಚಿರಂಜೀವಿಗೆ ವಿಲನ್ ಪಾತ್ರ ಮಾಡಬೇಕು ಎಂಬ ಆಸೆ ಇತ್ತಾದರೂ, ಅದು ಕೊನೆಗೂ ಇಡೇರಲೇ ಇಲ್ಲ. ಚಿರು ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲೂ ಹೀರೋ ಆಗಿಯೇ ಮಿಂಚಿದರು.