ಚಿರಂಜೀವಿ, ವಿಶಾಖಪಟ್ಟಣಂಗೆ ಶಿಫ್ಟ್​ ಆಗುವುದಕ್ಕೆ ಯೋಚಿಸುತ್ತಿರುವುದು ಅದೇ ಕಾರಣಕ್ಕಾ?

Chiranjeevi
Published on

ಹೈದರಾಬಾದ್​: ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ' ಚಿತ್ರವು ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಮೂರು ಚಿತ್ರಗಳಿಂದ ಸೋಲಿನ ರುಚಿಯನ್ನೇ ನೋಡಿರುವ ಚಿರಂಜೀವಿ, ಈ ಚಿತ್ರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಈ ಮಧ್ಯೆ ಚಿರಂಜೀವಿ, ಹೈದರಾಬಾದ್​ ಬಿಟ್ಟು ವಿಶಾಖಪಟ್ಟಣಂ ನಿವಾಸಿಯಾಗಲಿದ್ದಾರಂತೆ. ಹಾಗಂತ ಖುದ್ದು ಚಿರಂಜೀವಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ, 'ವಾಲ್ಟರ್​ ವೀರಯ್ಯ' ಚಿತ್ರದ ಪ್ರೀರಿಲೀಸ್​ ಇವೆಂಟ್​ನಲ್ಲಿ ಮಾತನಾಡಿರುವ ಅವರು, ಹಲವು ವಿಷಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲಿ ತಮ್ಮ ಮೆಚ್ಚಿನ ನಗರ ವೈಜಾಗ್​ನಲ್ಲಿ ಸಮುದ್ರದಡದ ಬಳಿ ನೆಲೆಗೊಳ್ಳುವುದು ಸಹ ಒಂದು.

'ವೈಜಾಗ್​ನ ನಿವಾಸಿಯಾಗಬೇಕು ಎನ್ನುವುದು ನನ್ನ ಬಹಳ ವರ್ಷಗಳ ಕನಸು. ಈ ನಿಟ್ಟಿನಲ್ಲಿ ಇದೀಗ ಹೆಜ್ಜೆ ಇಟ್ಟಿದ್ದೇನೆ. ಭೀಮ್ಲಿ ಪ್ರದೇಶದಲ್ಲಿ ಜಾಗ ಕೊಂಡಿದ್ದು, ಅಲ್ಲೊಂದು ಮನೆ ಕಟ್ಟಿಸುವ ಯೋಚನೆ ಇದೆ. ಸದ್ಯಕ್ಕೆ ರಜೆ ಕಳೆಯಲಿಕ್ಕೆ ಆ ಮನೆಯನ್ನು ಬಳಸುತ್ತೇನೆ. ಕ್ರಮೇಣ ಅಲ್ಲೇ ಹೋಗಿ ಸೆಟಲ್​ ಆಗುವ ಯೋಚನೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ತೆಲಂಗಾಣದಲ್ಲಿರುವ ತೆಲುಗು ರಂಗವನ್ನು ಆಕರ್ಷಿಸುವುದಕ್ಕೆ ತನ್ನತ್ತ ಆಂಧ್ರ ಪ್ರದೇಶ ಸರ್ಕಾರವು ಹಲವು ಕಸರತ್ತುಗಳನ್ನು ಮಾಡುತ್ತಿದೆ. ಅಲ್ಲಿ ಸ್ಟುಡಿಯೋಗಳನ್ನು ಸ್ಥಾಪಿಸಿ, ಅಲ್ಲೇ ಚಿತ್ರೀಕರಣ ಮಾಡುವುದಕ್ಕೆ ಹಲವು ಆಫರ್​ಗಳನ್ನು ಚಿತ್ರರಂಗಕ್ಕೆ ನೀಡುತ್ತಿದೆ. ಚಿರಂಜೀವಿ ಇದೀಗ ವೈಜಾಗ್​ನಲ್ಲಿ ನೆಲೆಗೊಳ್ಳುವ ಬಗ್ಗೆ ಮಾತಾಡಿದ್ದು, ಇದೇ ಪ್ಲಾನ್​ನ ಒಂದು ಭಾಗವ ಎಂಬ ಚರ್ಚೆ ಟಾಲಿವುಡ್​ನಲ್ಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net