

ಟಾಲಿವುಡ್‍ನ `ಮೆಗಾಸ್ಟಾರ್' ಚಿರಂಜೀವಿ ಟ್ವಿಟರ್‍ನಲ್ಲಿ ಸಕ್ರಿಯವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಹಲವು ವಿಷಯಗಳ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದುದು ಗೊತ್ತೇ ಇದೆ. ಈಗ ಚಿರಂಜೀವಿ ಏಕಾಏಕಿ ಟ್ವಿಟರ್‍ನಿಂದ ನಾಪತ್ತೆಯಾಗಿದ್ದಾರೆ. ಇಷ್ಟಕ್ಕೂ ಚಿರಂಜೀವಿ ಅವರು ಹಾಗೆ ಮಾಯವಾಗಿದ್ದು ಏಕೆ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ.
ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್‍ಗಳೆಲ್ಲಾ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೂ, ಚಿರಂಜೀವಿ ಮಾತ್ರ ಅದ್ಯಾಕೋ ದೂರವೇ ಉಳಿದಿದ್ದರು. ತಮಗೆ ಅನಿಸಿದ್ದನ್ನು ಪತ್ರಿಕಾಗೋಷ್ಠಿ ಅಥವಾ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಸೋಷಿಯಲ್ ಮೀಡಿಯಾಗೆ ಬರಬೇಕು ಎಂಬ ಅಭಿಮಾನಿಗಳ ಒತ್ತಾಯದ ಮೇಲೆ ಮಾರ್ಚ್ 25ರಂದು ಅವರು ತಮ್ಮ ಟ್ವಿಟರ್ ಖಾತೆ ತೆರೆದಿದ್ದರು.
ಅಲ್ಲಿಂದ ಚಿರಂಜೀವಿ ಅವರು ಎರಡು ದಿನಗಳಿಗೆ ಒಮ್ಮೆಯಾದರೂ ಒಂದಿಷ್ಟು ಏನಾದರೂ ಬರೆಯುತ್ತಿದ್ದರು. ಚಿತ್ರರಂಗದಲ್ಲಿ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುವುದರ ಜತೆಗೆ, ಕೆಲವು ವಿಷಯಗಳ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಕ್ರಮೇಣ ಅವರು ಬರೆಯುವುದು ಕಡಿಮೆಯಾಯಿತು. ಜೂನ್ 21ರಂದು ಅಪ್ಪಂದಿರ ದಿನದ ಅಂಗವಾಗಿ, ಅವರು ಶುಭ ಕೋರಿದ್ದು ಬಿಟ್ಟರೆ, ಈ 20 ದಿನಗಳಿಂದ ಅವರು ಟ್ವಿಟರ್‍ನಿಂದ ದೂರವೇ ಉಳಿದಿದ್ದಾರೆ.
ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್
ಸಕ್ರಿಯವಾಗಿದ್ದ ಚಿರಂಜೀವಿ ಅವರು, ಟ್ವಿಟರ್‍ನಿಂದ ದೂರವಾಗುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಅವರಿಗೆ ಯಾವುದಾದರೂ ವಿಷಯದಲ್ಲಿ ಬೇಸರವಾಯಿತಾ ಅಥವಾ ಇನ್ನೇನಾದರೂ ಕಾರಣವಿರಬಹುದಾ ಎಂದು ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡು ಕೂತಿದ್ದಾರೆ.
ಚಿರಂಜೀವಿ ಅವರು ಟ್ವಿಟರ್‍ನಲ್ಲಿ ಸಕ್ರಿಯವಾಗದಿರುವುದಕ್ಕೆ ಎರಡು ಕಾರಣಗಳನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ಯಾರೇ ಆದರೂ, ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಬಹಳ ಉತ್ಸಾಹವಿರುತ್ತದೆ. ಜನ ತೋರಿಸುತ್ತಿರುವ ಪ್ರೀತಿ ನೋಡಿ ಖುಷಿಯಾಗಿ, ಅವರು ಇನ್ನಷ್ಟು ಬರೆಯುತ್ತಿರುತ್ತಾರೆ. ಒಂದು ಹಂತದಲ್ಲಿ ಆ ಉತ್ಸಾಹ ಸಹಜವಾಗಿಯೇ ಕಡಿಮೆಯಾಗುತ್ತದೆ. ಚಿರಂಜೀವಿ ಅವರಿಗೂ ಉತ್ಸಾಹ ಕಡಿಮೆಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ ...
ಇನ್ನೊಂದು ಕಾರಣವೇನೆಂದರೆ, ಕಳೆದ ನಾಲ್ಕು ತಿಂಗಳುಗಳಿಂದ ಯಾವುದೇ ಮಹತ್ತರವಾದ ಬೆಳವಣಿಗೆಗಳಾಗದೇ ಇರುವುದು. ಕರೊನಾ ಮತ್ತು ಲಾಕ್‍ಡೌನ್‍ನಿಂದ ತೆಲುಗು ಚಿತ್ರರಂಗದಲ್ಲಿ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಬಹುತೇಕ ನಿಂತಿವೆ. ಮಾತನಾಡುವುದಕ್ಕೆ ಹೆಚ್ಚು ವಿಷಯವಿಲ್ಲ. ಹಾಗಾಗಿ ಚಿರಂಜೀವಿ ಅವರು ವಿಮುಖರಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಇದೆಲ್ಲದರ ಜತೆಗೆ ಇನ್ನೂ ಒಂದು ಕಾರಣವಿದೆ ಎನ್ನಲಾಗುತ್ತಿದೆ. ಚಿರಂಜೀವಿ ಅವರ ಟ್ವಿಟರ್ ನೋಡಿಕೊಳ್ಳುತ್ತಿದ್ದುದು ಅವರ ಮಗ ರಾಮ್‍ಚರಣ್ ತೇಜ. ಚಿರಂಜೀವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ, ರಾಮ್‍ಚರಣ್ ಅದನ್ನು ಬರೆದು ಹಾಕುತ್ತಿದ್ದರಂತೆ. ಓವರ್ ದಿ ಟಾಪ್ (ಓಟಿಟಿ)ಗೆ ರಾಮ್‍ಚರಣ್ ಎಂಟ್ರಿ ಕೊಡುತ್ತಿರುವ ಸುದ್ದಿ ಕೇಳಿ ಬಂದಿದ್ದು, ಬಹುಶಃ ಆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ಖಾತೆ ನಿಭಾಯಿಸದಿರುವ ಸಾಧ್ಯತೆ ಇದೆ. ಹಾಗಾಗಿ ಚಿರಂಜೀವಿ ಅವರ ಟ್ವಿಟರ್‍ನಲ್ಲಿ ಕಳೆದ 20 ದಿನಗಳಿಂದ ಯಾವುದೇ ಹೊಸ ಟ್ವೀಟ್ ಕಾಣಿಸಿಕೊಂಡಿಲ್ಲ.
ಕಾರಣ ಏನೇ ಇರಲಿ, ಚಿರಂಜೀವಿ ಟ್ವಿಟರ್‍ನಿಂದ ದೂರವಾಗಿರುವ ವಿಷಯ ಅವರ ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಚರ್ಚೆಗಳಿಗೆ ಯಾವಾಗ ಫುಲ್‍ಸ್ಟಾಪ್ ಹಾಕಿ ಅವರು ಮತ್ತೆ ವಾಪಸ್ಸಾಗಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.