

ಹೈದರಾಬಾದ್: ಬಾಲಿವುಡ್ ನಟ ಚಿರಂಜೀವಿ ಸಹ ತಮ್ಮ ಪತ್ನಿ ಸುರೇಖ ಅವರ ಆಸೆಯನ್ನು ಪೂರೈಸುವ ನಿಟ್ಟಿನಲ್ಲಿ ಇತ್ತೀಚೆಗೆ ಟಾಪ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಚಿರಂಜೀವಿ ಅವರ ಪತ್ನಿಯ ಆಸೆಗೂ, ರಾಜಮೌಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯವೇನೆಂದರೆ, ಚಿರಂಜೀವಿ ಮತ್ತು ರಾಮ್ಚರಣ್ ತೇಜ ಒಟ್ಟಿಗೆ ನಟಿಸಬೇಕು ಎಂಬುದು ಚಿರಂಜೀವಿ ಅವರ ಪತ್ನಿಯ ಆಸೆಯಂತೆ. ಅದರಂತೆ ಅಪ್ಪ-ಮಗ ಇಬ್ಬರೂ 'ಆಚಾರ್ಯ' ಎಂಬ ಚಿತ್ರದಲ್ಲಿ ನಟಿಸುವ ಸುದ್ದಿಯಾಗಿತ್ತು.
ಆದರೆ, ಅವರಿಬ್ಬರು ನಟಿಸುವುದು ಸಂಶಯ ಎಂಬಂತಹ ಸುದ್ದಿಗಳು ಕೇಳಿ ಬಂದಿದ್ದವು. ಕಾರಣ, ಅಕ್ಟೋಬರ್ನಲ್ಲಿ 'ಆಚಾರ್ಯ' ಚಿತ್ರದ ಚಿತ್ರೀಕರಣ ಮಾಡುವುದಕ್ಕೆ ಚಿರಂಜೀವಿ ಯೋಚಿಸುತ್ತಿದ್ದರು. ಅದೇ ಸಂದರ್ಭದಲ್ಲಿ ರಾಜಮೌಳಿ ಸಹ ತಮ್ಮ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ನಡೆಸುವ ಸ್ಕೆಚ್ ಹಾಕಿಕೊಂಡಿದ್ದರು.
ಒಂದು ಪಕ್ಷ ಅದೇ ಸಮಯದಲ್ಲಿ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಶುರುವಾದರೆ, ರಾಮ್ಚರಣ್ ತೇಜ ಇತ್ತ 'ಆಚಾರ್ಯ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಆಗುತ್ತಿರಲಿಲ್ಲ. ಹಾಗೇನಾದರೂ ಆದರೆ, ಚಿರಂಜೀವಿ ಮತ್ತು ರಾಮ್ಚರಣ್ ತೇಜ ಅವರನ್ನು ಒಂದೇ ಫ್ರೇಮ್ನಲ್ಲಿ ನೋಡುವ ಚಿರಂಜೀವಿ ಅವರ ಪತ್ನಿಯ ಆಸೆ ಈಡೇರುತ್ತಿರಲಿಲ್ಲ.
ಯಾವಾಗ ಇಂಥದ್ದೊಂದು ಸಮಸ್ಯೆ ಎದುರಾಯಿತೋ, ಚಿರಂಜೀವಿ ನೇರವಾಗಿ ರಾಜಮೌಳಿ ಅವರನ್ನು ಭೇಟಿ ಮಾಡಿದ್ದಾರೆ. ಹೇಗಾದರೂ ರಾಮ್ಚರಣ್ ತೇಜ ಅವರನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಾ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಒಪ್ಪಿರುವ ರಾಜಮೌಳಿ, 'ಆರ್ಆರ್ಆರ್' ಚಿತ್ರದ ಚಿತ್ರೀಕರಣವನ್ನು ಸ್ವಲ್ಪ ಮುಂದಕ್ಕೆ ಹಾಕಿಕೊಂಡಿದ್ದಾರಂತೆ.
ಈಗ ರಾಮ್ಚರಣ್ ತೇಜ ಮೊದಲು 'ಆಚಾರ್ಯ' ಚಿತ್ರದಲ್ಲಿನ ಕೆಲಸ ಮುಗಿಸಿ, ಆ ನಂತರ 'ಆರ್ಆರ್ಆರ್' ಚಿತ್ರದ ಚಿತ್ರೀಕರಣಕ್ಕೆ ಹೋಗಲಿದ್ದಾರೆ. ಈ ಮೂಲಕ ಚಿರಂಜೀವಿ ತಮ್ಮ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ.