

ಬೆಂಗಳೂರು: ಚೇತನ್ ಚಿತ್ರರಂಗಕ್ಕೆ ಬಂದು 13 ವರ್ಷಗಳೇ ಆಗಿವೆ. ಇಷ್ಟು ವರ್ಷಗಳಲ್ಲಿ ಅವರು ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕನ್ನಡದಲ್ಲಲ್ಲ, ತೆಲುಗಿನಲ್ಲಿ ಎಂಬುದು ವಿಶೇಷ.
ಇದನ್ನೂ ಓದಿ: ನಿಮಿಷಾಂಭಾ ದೇಗುಲದಲ್ಲಿ ಆ ಒಂದು ಕನಸು ಚಿತ್ರದ ಮುಹೂರ್ತ
ಈ ಹಿಂದೆ ಕನ್ನಡದಲ್ಲಿ ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಸಾಯಿಕಾರ್ತಿಕ್ ಇದೀಗ ತೆಲುಗಿನಲ್ಲಿ ಒಂದು ಚಿತ್ರ ನಿರ್ಮಿಸುತ್ತಿದ್ದು, ಆ ಚಿತ್ರಕ್ಕೆ ‘ಆ ದಿನಗಳು’ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ವಿರಾಟ್ ಚಕ್ರವರ್ತಿ ಎನ್ನುವವರು ನಿರ್ದೇಶನ ಮಾಡಲಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೈದರಾಬಾದ್‌ನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಚೇತನ್, ‘ಈ ತರಹದ್ದೊಂದು ಪಾತ್ರ ಮಾಡಿರಲಿಲ್ಲ. ಇದೊಂದು ಥ್ರಿಲ್ಲರ್, ಕ್ರೈಮ್, ಕಾಮಿಡಿ ಚಿತ್ರವಾಗಿದ್ದು, ನಾನೊಬ್ಬ ವಿಚಿತ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನ್ನ ಬಾಡಿ ಲಾಂಗ್ವೇಜ್ ವಿಭಿನ್ನವಾಗಿದೆ. ಒಟ್ಟಾರೆ, ಪಾತ್ರ ಬಹಳ ಆಸಕ್ತಿಕರವಾಗಿದ್ದರಿಂದ ಒಪ್ಪಿಕೊಂಡೆ’ ಎನ್ನುತ್ತಾರೆ.
ಇನ್ನು, ಕನ್ನಡದ ವಿಷಯಕ್ಕೆ ಬರುವುದಾದರೆ, ‘ರಣಂ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಚೇತನ್, ‘ಮಾರ್ಗ’ ಎಂಬ ಚಿತ್ರದಲ್ಲಿ ನಟಿಸಲಿದ್ದು, ಆ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಗಲಿದೆ.