'ತೂತು ಮಡಿಕೆ' ಆಯ್ತು; ಈಗ ಇನ್ನೊಂದು ಚಿತ್ರಕ್ಕೆ ಕೈಹಾಕಿದ ಅದೇ ತಂಡ

Thootu Madike - Chandrakeerthi
Published on

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು ಚಂದ್ರಕೀರ್ತಿ ಅಭಿನಯದ ಮತ್ತು ನಿರ್ದೇಶನದ 'ತೂತು ಮಡಿಕೆ'. ಚಿತ್ರ ದೊಡ್ಡ ಹಿಟ್​ ಆಗದಿದ್ದರೂ, ತಕ್ಕ ಮಟ್ಟಿಗೆ ಗಮನ ಸೆಳೆದಿತ್ತು. ಈಗ ಅದೇ ನಿರ್ಮಾಪಕರು ಮತ್ತು ನಿರ್ದೇಶಕರು ಇನ್ನೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ.

ಹೌದು, ‘ತೂತು ಮಡಿಕೆ’ ನಂತರ ಚಂದ್ರಕೀರ್ತಿ ಮತ್ತೊಂದು ಸಿನಿಮಾಗೆ ಆಕ್ಷನ್-ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಬಾರಿ ಲವ್ ಹಾಗೂ ಆಕ್ಷನ್ ಅಂಶಗಳಿರುವ ಕಥೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ಸ್ಕ್ರಿಪ್ಟ್​ ಕೆಲಸ ನಡೆಯುತ್ತಿದೆ. 'ತೂತು ಮಡಿಕೆ' ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್​ನ ಮಧುಸೂಧನ್ ರಾವ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಚಂದ್ರಕೀರ್ತಿ, '‘ತೂತು ಮಡಿಕೆ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಸ್ಪೂರ್ತಿಯಿಂದಲೇ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ. ಈ ಚಿತ್ರದಲ್ಲಿ ನಾಯಕ ನಟನಾಗಿ ನಾನೇ ನಟಿಸುತ್ತಿದ್ದೇನೆ. ಕೊನೆಯ ಹಂತದ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಹಾಗೂ ತಂಡ ನಿರತರಾಗಿದ್ದೇವೆ. ಇದು ಲವ್ ಹಾಗೂ ಆಕ್ಷನ್ ಸಬ್ಜೆಕ್ಟ್ ಇರುವ ಸಿನಿಮಾ. ಹಳ್ಳಿ ಹಾಗೂ ಕಾಡಿನ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ಫೆಬ್ರವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದೇವೆ' ಎಂದು ಮಾಹಿತಿ ಕೊಡುತ್ತಾರೆ.

ಅಂದಹಾಗೆ, ಹೆಸರಿಡದ ಈ ಚಿತ್ರಕ್ಕೆ ಸ್ವಾಮಿನಾಥನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಮುಗಿಯುತ್ತಿದ್ದಂತೆ ಪ್ರಿ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದ್ದು, ಟೈಟಲ್, ಸಿನಿಮಾ ತಾರಾಬಳಗ ಹಾಗೂ ತಂತ್ರಜ್ಞರ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net