

ಬೆಂಗಳೂರು: 'ಈ ವುಡ್ಗಳನ್ನೆಲ್ಲ ಬಿಟ್ಟಾಕಿ. ಎಲ್ಲ ಚಿತ್ರಗಳನ್ನು ಒಂದು ಎಂದು ಪರಿಗಣಿಸಿ ಗೌರವಿಸಿ ...' ಎಂದು ಯಶ್ ಅದೆಷ್ಟೋ ದಿನಗಳಿಂದ ಹೇಲುತ್ತಲೇ ಬಂದಿದ್ದಾರೆ. ಈಗ ಪುನಃ ಈ ಬಗ್ಗೆ ಮಾತಾಡಿರುವ ಅವರು, ಯಾವುದೇ ಚಿತ್ರರಂಗದ ಬಗ್ಗೆ ತಾರತಮ್ಯ ಬೇಡ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಬಾಲಿವುಡ್ ಬಗ್ಗೆ ಎಲ್ಲರೂ ಕೆಟ್ಟದಾಗಿ ಮಾತನಾಡುತ್ತಿರುವುದನ್ನು ಕೇಳಿದ್ದೇನೆ. ಇಲ್ಲಿ ಯಾವುದೇ ಚಿತ್ರರಂಗ ಮೇಲಲ್ಲ, ಯಾವುದೂ ಕೀಳಲ್ಲ. ಇವತ್ತು ಬಾಲಿವುಡ್ನಲ್ಲಿ ಹೆಚ್ಚು ಚಿತ್ರಗಳು ಗೆಲ್ಲುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಕಡೆಗಣಿಸುವುದು ತಪ್ಪು. ಯಾವುದೇ ಚಿತ್ರರಂಗವನ್ನು ಕೀಳಾಗಿ ನೋಡಬಾರದು. ಹಿಂದೊಮ್ಮೆ ನಾವೇ ಈ ಸಮಸ್ಯೆಯನ್ನು ಎದುರಿಸಿದ್ದೇವೆ. ಪುನಃ ಅಂಥದ್ದೊಂದು ಗೌರವವನ್ನು ಮರಳಿ ಪಡೆಯುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಹೀಗಿರುವಾಗ, ನಾವು ಇನ್ನೊಬ್ಬರನ್ನು ಅಗೌರದಿಂದ ನೋಡಬಾರದು. ನಾವು ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳನ್ನೂ ಗೌರವಿಸಬೇಕು. ಈ ಉತ್ತರ, ದಕ್ಷಿಣೆ ಎಂಬ ವಿಭಜನೆಯನ್ನು ಬಿಟ್ಟುಬಿಡಬೇಕು' ಎಂದು ಹೇಳಿದ್ದಾರೆ.
ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, 'ಬಾಲಿವುಡ್ ಏನೂ ಇಲ್ಲ, ಅಲ್ಲಿಗಿಂತ ನಮ್ಮಲ್ಲೇ ಒಳ್ಳೆಯ ಸಿನಿಮಾಗಳು ಬರುತ್ತವೆ ಅಂತೆಲ್ಲ ಮಾತನಾಡಬಾರದು. ಇವತ್ತು ಬಾಲಿವುಡ್ನಲ್ಲಿ ಚಿತ್ರಗಳು ಗೆಲ್ಲದಿರಬಹುದು. ಆದರೆ, ಅದೊಂದು ಹಂತ ಅಷ್ಟೇ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ನಾವು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ' ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಯಶ್ ಅಭಿನಯದ 'ಕೆಜಿಎಫ್ 2' ಚಿತ್ರವು ಏ.14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಯಶ್ ಅಭಿನಯದ ಮುಂದಿನ ಚಿತ್ರ ಯಾವುದು ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.