

ಮುಂಬೈ: ಬಾಲಿವುಡ್ನ ನಟ-ನಟಿಯರು ಯಾರದ್ದೋ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದು ಹೊಸ ವಿಷಯವಲ್ಲ. ಹಾಗೆ ಡ್ಯಾನ್ಸ್ ಮಾಡಿ ಸಾಕಷ್ಟು ಹಣ ಸಂಪಾದಿಸಿದ ಹಲವರಿದ್ದಾರೆ. ಆದರೆ, ತನಗೆ ಅಂತಹ ಅವಕಾಶಗಳಿದ್ದರೂ ತಾನು ಯಾರದ್ದೇ ಮದುವೆಯಲ್ಲೂ ನೃತ್ಯ ಮಾಡಲಿಲ್ಲ, ಒಂದು ಪಕ್ಷ ಮಾಡಿದ್ದರೆ ಕೋಟಿ ಕೋಟಿ ಸಂಪಾದಿಸುತ್ತಿದ್ದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.
ಕಂಗನಾ ಹಾಗೆ ಹೇಳುವುದಕ್ಕೂ ಕಾರಣವಿದೆ. ಬಾಲಿವುಡ್ನ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಒಂದು ವೀಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಅವರು ತಮ್ಮ ಹಿರಿಯ ಸಹೋದರಿ ದಿವಂಗತ ಲತಾ ಮಂಗೇಶ್ಕರ್ ಕುರಿತು ಮಾತನಾಡಿದ್ದರು. ಲತಾ ಮಂಗೇಶ್ಕರ್ ಅವರಿಗೆ ಒಂದು ಮದುವೆಯಲ್ಲಿ ಹಾಡುವುದಕ್ಕೆ ಒಂದು ಮಿಲಿಯನ್ ಡಾಲರ್ ಸಂಭಾವನೆ ಕೊಡುವುದಕ್ಕೆ ಆಯೋಜಕರು ಒಪ್ಪಿಕೊಂಡಿದ್ದರೂ, ಲತಾ ಅವರು ಅದನ್ನು ನಿರಾಕರಿಸಿದ್ದರಂತೆ.
ಇದನ್ನೂ ಓದಿ: ತೆಲುಗು ಚಿತ್ರರಂಗದ ದಿಗ್ಗಜ ಕೈಕಲ ಸತ್ಯನಾರಾಯಣ ಇನ್ನಿಲ್ಲ
ಈ ವೀಡಿಯೋ ಶೇರ್ ಮಾಡಿಕೊಂಡಿರುವ ಕಂಗನಾ, 'ನಾನು ಸಹ ಯಾವುದೇ ಖಾಸಗೀ ಪಾರ್ಟಿಗಳಲ್ಲಿ ಅಥವಾ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಹೋಗಿಲ್ಲ. ಹಾಗೆ ನೋಡಿದರೆ, ನಾನು ಹಲವು ಜನಪ್ರಿಯ ಹಾಡುಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆ ಹಾಡುಗಳಿಗೆ ಡ್ಯಾನ್ಸ್ ಮಾಡಿ ಎಂದು ಹಲವರು ಕೇಳಿಕೊಂಡಿದ್ದಾರೆ. ದೊಡ್ಡ ರೊಕ್ಕ ಕೊಡುವುದಕ್ಕೆ ಬಂದಿದ್ದಾರೆ. ಆದರೆ, ನಾನು ಅವೆಲ್ಲವನ್ನೂ ನಿರಾಕರಿಸಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.