

ಹೈದ್ರಾಬಾದ್: ತೆಲುಗು ಚಿತ್ರರಂಗದ ದಿಗ್ಗಜ, ನಟ ಕೈಕಲ ಸತ್ಯನಾರಾಯಣ ಅವರು ಇಂದು(ಶುಕ್ರವಾರ) ಮುಂಜಾನೆ ಹೈದರಾಬಾದ್ನ ತಮ್ಮ ನಿವಾಸದಲ್ಲಿ ನಿಧನರಾದರು.
ಕೈಕಲ ಸತ್ಯನಾರಾಯಣ 87 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 6 ದಶಕಗಳ ಸಿನಿ ಜರ್ನಿಯಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಡಾ.ರಾಜ್ಕುಮಾರ್ ಅವರೊಂದಿಗೂ ಅಭಿನಯಿಸಿದ್ದರು. ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದರಾಗಿಯೂ ಆಯ್ಕೆಯಾಗಿದ್ದರು.
ನೆಚ್ಚಿನ ಹಿರಿಯ ನಟ ಕೈಕಲ ಸತ್ಯನಾರಾಯಣ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಸಹಸ್ರಾರು ಅಭಿಮಾನಿಗಳು ಮತ್ತು ಸಿನಿರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ನಟನ ಫೋಟೊ ಹಾಕಿ ಸಂತಾಪ ಸೂಚಿಸಿದ್ದಾರೆ.
ಕೈಕಲ ಸತ್ಯನಾರಾಯಣ ಅವರಿಗೆ ಪತ್ನಿ ನಾಗೇಶ್ವರಮ್ಮ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ(ಡಿ.24) ಮಹಾಪ್ರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ ಮೋಹನ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ನಟರಾದ ಚಿರಂಜೀವಿ, ರಾಮ್ಚರಣ್, ಮಹೇಶ್ ಬಾಬು, ರವಿ ತೇಜ, ನಂದಮೂರಿ ಕಲ್ಯಾಣರಾಮ್... ಸೇರಿದಂತೆ ಹಲವು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅಂತಿಮದರ್ಶನ ಪಡೆಯಲು ತೆಲುಗು ಚಿತ್ರರಂಗವೇ ತೆರಳುತ್ತಿದೆ.