ಬಾಳಿ ಬದುಕಬೇಕಿದ್ದ ಮಗ-ಸೊಸೆ ಜತೆ ಸಾವಿನ ಮನೆಯ ಕದ ತಟ್ಟಿದ ತಾಯಿ! ಕಿರಿ ಮಗನ ತಪ್ಪಿಗೆ ನಡೆದೇ ಹೋಯ್ತು ಘೋರ ದುರಂತ

sucide
Published on

ಹಾವೇರಿ: ಮನೆಯ ಕಿರಿಮಗ ಮಾಡಿದ ತಪ್ಪಿಗೆ ತಾಯಿ, ಸಹೋದರ ಮತ್ತು ಈತನ ಪತ್ನಿ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ದಂಪತಿ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಬಾಳಿ ಬದುಕಬೇಕಿದ್ದ ಮಗ-ಸೊಸೆ ಜತೆ ತಾಯಿಯೂ ಸಾವಿನ ಮನೆಯ ಕದ ತಟ್ಟಿದ್ದು, ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ಲಲಿತಾ ಕಮಡೊಳ್ಳಿ(40), ಇವರ ಪುತ್ರ ಕಿರಣ(21), ಸೊಸೆ ಸೌಜನ್ಯ(20) ಮೃತ ದುರ್ದೈವಿಗಳು. ಕಿರಣ ಮತ್ತು ಸೌಜನ್ಯರ ಮದುವೆ 3 ತಿಂಗಳ ಹಿಂದಷ್ಟೇ ನೆರವೇರಿತ್ತು. ನವದಂಪತಿ ತಮ್ಮದೇ ಲೋಕದಲ್ಲಿದ್ದರು. ಅತ್ತ ಮಗನಿಗೆ ಮದುವೆಯಾದ ಖುಷಿಯಲ್ಲಿ, ಮುದ್ದಾದ ಸೊಸೆ ಸಿಕ್ಕ ಸಂತಸದಲ್ಲಿ ತಾಯಿ ಇದ್ದರು. ಈ ಮೂವರ ಬದುಕಿಗೆ ಇದೇ ಮನೆಯ ಮತ್ತೊಬ್ಬ ಮಗನ ಲವ್​ ಸ್ಟೋರಿ ಕೊಳ್ಳಿ ಇಟ್ಟಿದೆ.

ಸ್ವಗ್ರಾಮದ ಪಟ್ಟಣಶೆಟ್ಟಿ ಕುಟುಂಬಕ್ಕೆ ಸೇರಿದ ಯುವತಿಯನ್ನು ಲಲಿತಾ ಕಮಡೊಳ್ಳಿ ಅವರ ಮತ್ತೊಬ್ಬ ಮಗ ಅರುಣ ಪ್ರೀತಿಸುತ್ತಿದ್ದ. ಇತ್ತೀಚಿಗೆ ಪ್ರೇಯಸಿ ಜತೆ ಊರು ಬಿಟ್ಟಿದ್ದ. ಇದೇ ವಿಚಾರಕ್ಕೆ ಯುವತಿಯ ಕುಟುಂಬಸ್ಥರು ಭಾರತಿ ಅವರ ಮನೆ ಬಳಿ ಗಲಾಟೆಯನ್ನೂ ಮಾಡಿದ್ದರು. ತಮ್ಮ ಮಗಳನ್ನ ಎಲ್ಲಿದ್ದರೂ ಹುಡುಕಿ ಕರೆತರಬೇಕು ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದು ಮನೆಯಲ್ಲೇ ನೇಣುಬಿಗಿದುಕೊಂಡು ತಾಯಿ ಜತೆ ನವದಂಪತಿಯೂ ದುರಂತ ಅಂತ್ಯ ಕಂಡಿದ್ದಾರೆ.

ಪಟ್ಟಣಶೆಟ್ಟಿ ಕುಟುಂಬಸ್ಥರ ಕಿರುಕುಳ ಸಹಿಸಲಾಗದೆ ನನ್ನ ಪತ್ನಿ, ಮಗ, ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿರೂಪಾಕ್ಷಪ್ಪ ಗಂಭೀರ ಆರೋಪ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net