ಚಮ್ಕಿಲಾಗೆ ಜೈ, ಅನಿಮಲ್​ಗೆ ಬೈ

Parineethi
Published on

ನಟಿ ಪರಿಣಿತಿ ಚೋಪ್ರಾ ಬಾಲಿವುಡ್​ನ ಹಲವು ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದರೂ, ಕಳೆದ ಕೆಲ ವರ್ಷಗಳಿಂದ ಅವರ ಒಂದೇ ಒಂದು ಸಿನಿಮಾ ಗೆಲುವಿನ ದಡ ಸೇರಿಲ್ಲ. ಈ ನಡುವೆ ಶತಾಯಗತಾಯ ಗೆಲ್ಲಲೇಬೇಕು ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ. ಅದಕ್ಕಾಗಿ ಒಪ್ಪಿಕೊಂಡಿರುವ ಚಿತ್ರವನ್ನೇ ಬಿಡಲಿದ್ದಾರೆ ಎನ್ನುವ ಸುದ್ದಿಗಳು ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿವೆ. ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ‘ಚಮ್ಕಿಲಾ’ ಹೆಸರಿನ ಸಿನಿಮಾ ಕೆಲಸ ಶುರುವಾಗಿದೆ.

ಖ್ಯಾತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನವನ್ನೇ ಬಯೋಪಿಕ್ ರೂಪದಲ್ಲಿ ನಿರ್ದೇಶಕರು ಹೊರತರುತ್ತಿದ್ದಾರೆ. ಇಂಥ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೇ ತಡ, ಕೈಯಲ್ಲಿದ್ದ ಬಿಗ್ ಚಿತ್ರವೊಂದನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರಂತೆ ಪರಿಣಿತಿ. ರಣಬೀರ್ ಕಪೂರ್ ಮತ್ತು ಪರಿಣಿತಿ ‘ಅನಿಮಲ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಈ ಹಿಂದೆಯೇ ಅಧಿಕೃತವಾಗಿತ್ತು. ಆದರೆ, ಶೂಟಿಂಗ್ ಮಾತ್ರ ಶುರುವಾಗಿರಲಿಲ್ಲ. ಇದೀಗ ‘ಚಮ್ಕಿಲಾ’ ಮತ್ತು ‘ಅನಿಮಲ್’ ಸಿನಿಮಾಗಳ ಚಿತ್ರೀಕರಣ ಏಕಕಾಲದಲ್ಲಿ ಶುರುವಾಗುವ ಸಾಧ್ಯತೆ ಇರುವುದರಿಂದ, ಮೊದಲ ಆದ್ಯತೆಯನ್ನು ‘ಚಮ್ಕಿಲಾ’ ಬಯೋಪಿಕ್​ಗೆ ನೀಡಲಿದ್ದಾರಂತೆ.

ಹಾಗಾದರೆ ಯಾರಿವರು ಅಮರ್ ಸಿಂಗ್ ಚಮ್ಕಿಲಾ? ಚಮ್ಕಿಲಾ ಓರ್ವ ಪಂಜಾಬಿ ಗಾಯಕ. 1980ರ ಕಾಲಘಟ್ಟದಲ್ಲಿ ವರ್ಷದ 365 ದಿನಗಳಲ್ಲಿ 366 ಶೋಗಳಲ್ಲಿ ಹಾಡಿ ಜನಮನಸೆಳೆದಿದ್ದರು. ಕೇವಲ 27ನೇ ವಯಸ್ಸಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹತ್ಯೆಗೀಡಾಗಿದ್ದರು. ಈಗ ಆ ಕಥೆಯೇ ಬಯೋಪಿಕ್ ರೂಪ ಪಡೆದುಕೊಳ್ಳುತ್ತಿದೆ. -ಏಜೆನ್ಸೀಸ್

c

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net