ಸಂಕ್ರಾಂತಿ ಸಂಜೇಲಿ ಧನ್ವೀರ್, ಮೇಘಾ; ಚಿತ್ರದ ಟ್ರೇಲರ್ ರಿಲೀಸ್ ಮಾಡಲಿರುವ ದರ್ಶನ್

kaiva
Published on

ಬೆಂಗಳೂರು: ಧನ್ವೀರ್, ಮೇಘಾಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಕೈವ’. ಚಿತ್ರಕ್ಕೆ ಜಯತೀರ್ಥ ಆ್ಯಕ್ಷನ್-ಕಟ್ ಹೇಳಿದ್ದು, ಇತ್ತೀಚೆಗಷ್ಟೆ ಆ್ಯಕ್ಷನ್ ಟೀಸರ್ ರಿಲೀಸ್ ಮಾಡಲಾಗಿತ್ತು. 1983ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿರುವ ವಿಭಿನ್ನ ಕಥಾಹಂದರದ ಚಿತ್ರವಿದು. ಇದೀಗ ಚಿತ್ರದ ಮೊದಲ ಗೀತೆಯನ್ನು ಚಿತ್ರತಂಡ ಮೈಸೂರಿನಲ್ಲಿ ಬಿಡುಗಡೆ ಮಾಡಿದೆ. ‘ಸಂಕ್ರಾಂತಿ ಸಂಜೇಲಿ..’ ಎಂದು ಸಾಗುವ ಗೀತೆಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ. ಅಜನೀಶ್ ಹುಟ್ಟುಹಬ್ಬದಂದು ಈ ಗೀತೆ ರಿಲೀಸ್ ಆಗಿದ್ದು ವಿಶೇಷ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ದಿನಕರ್ ತೂಗುದೀಪ, ಜೆಕೆ, ರಾಘು ಶಿವಮೊಗ್ಗ, ನಂದಗೋಪಾಲ್, ಉಗ್ರಂ ಮಂಜು, ರಮೇಶ್ ಇಂದಿರಾ, ಮಹಂತೇಶ್ ಹಿರೇಮಠ್, ಬಿ.ಎಂ.ಗಿರಿರಾಜ್, ಯಶ್ ಶೆಟ್ಟಿ ಮುಖ್ಯ ತಾರಾಗಣದಲ್ಲಿದ್ದಾರೆ. ಜತೆಗೆ ಶ್ವೇತ್ ಪ್ರಿಯಾ ನಾಯಕ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ಇಂದು ಟ್ರೇಲರ್ ಬಿಡುಗಡೆ:

ನಟ ದರ್ಶನ್ ಇತ್ತೀಚೆಗೆ ‘ಗರಡಿ’, ‘ಟಗರುಪಲ್ಯ’, ‘ಬ್ಯಾಡ್ ಮ್ಯಾನರ್ಸ್‌’ ಸಿನಿಮಾಗಳ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರು. ಇದೀಗ ಧನ್ವೀರ್, ಮೇಘಾ ಶೆಟ್ಟಿ ಅಭಿನಯಿಸುತ್ತಿರುವ ‘ಕೈವ’ ಚಿತ್ರದ ಟ್ರೇಲರ್ ಕೂಡ ದರ್ಶನ್ ರಿಲೀಸ್ ಮಾಡಲಿದ್ದಾರೆ. ಇಂದು ಕೆಎಲ್‌ಇ ಕಾಲೇಜಿನ ಮೈದಾನದಲ್ಲಿ ಸಂಜೆ 6:30ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಹಾಗೂ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ದರ್ಶನ್ ಜತೆ ರಚಿತಾ ರಾಮ್, ಆಶಾ ಭಟ್, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ ಸೇರಿ ಹಲವು ತಾರೆಯರು ಭಾಗವಹಿಸಲಿದ್ದಾರೆ. ಅಂದಹಾಗೆ, ಇದೇ ಡಿ.8ಕ್ಕೆ ‘ಕೈವ’ ರಾಜ್ಯಾದ್ಯಂತ ತೆರೆಕಾಣಲು ರೆಡಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net