

ಚಿತ್ರ: ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ
ನಿರ್ದೇಶನ: ಆಸ್ಕರ್ ಕೃಷ್ಣ
ನಿರ್ಮಾಣ: ಸೆವೆನ್ ರಾಜ್
ತಾರಾಗಣ: ಆಸ್ಕರ್ ಕೃಷ್ಣ, ಲೋಕೇಂದ್ರ ಸೂರ್ಯ, ಗೌರಿ ನಾಯರ್, ಸೆವೆನ್ ರಾಜ್
ಸ್ಟಾರ್: 2.5
ಒಬ್ಬ ಬಾಯಿ ತೆರೆಯುವುದೇ ಇಲ್ಲ. ಎಷ್ಟು ಬೇಕೋ ಅಷ್ಟೇ ಮಾತು. ಇನ್ನೊಬ್ಬ ಬಾಯಿ ಮುಚ್ಚುವುದೇ ಇಲ್ಲ. ಬೇಕಿದ್ದು, ಬೇಡದ್ದು ಎಲ್ಲವನ್ನೂ ಒಂದೇ ಉಸಿರಿನಲ್ಲಿ ಆಡಿ ಮುಗಿಸುತ್ತಾರೆ. ಇವರಿಬ್ಬರೂ ಜೀವಕ್ಕೆ ಜೀವ ಕೊಡುವ ಚಡ್ಡಿದೋಸ್ತ್ಗಳು. ಈ ದೋಸ್ತ್ಗಳ ನಡುವೆ ಬಿರುಕು ಬಂದರೆ?
ಅವನು ಗಡಾರಿ (ಲೋಕೇಂದ್ರ ಸೂರ್ಯ). ಮಹಾನ್ ಚಪಲ ಚನ್ನಿಗರಾಯ. ಸದಾ ಒಂದೊಲ್ಲೊಂದು ಹೆಣ್ಣಿನ ಸಹವಾಸದಲ್ಲಿರುವ ಮತ್ತು ಮಾತಾಡುತ್ತಲೇ ಇರುವ ಗಡಾರಿಗೊಬ್ಬ ಚಡ್ಡಿದೋಸ್ತು ಫ್ಯಾಶನ್ ರಾಜ (ಆಸ್ಕರ್ ಕೃಷ್ಣ). ಜಿಲ್ಲಾಧಿಕಾರಿಯನ್ನು ಸಾಯಿಸುವುದಕ್ಕೆ ಶಾಸಕ ಸೆವೆನ್ ರಾಜ್ನಿಂದ ಸುಪಾರಿ ಪಡೆದು ಬರುವ ಗಡಾರಿಯನ್ನು ರಾಜ ಎಚ್ಚರಿಸುತ್ತಾನೆ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಈ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆದರೆ, ಅನಿರೀಕ್ಷಿತ ಘಟನೆಯಿಂದ ಜಿಲ್ಲಾಧಿಕಾರಿಯ ಮರ್ಡರ್ ಕೇಸ್ನಲ್ಲಿ ಗಡಾರಿ ಮತ್ತು ರಾಜ ಇಬ್ಬರೂ ಫಿಟ್ ಆಗಿ, ಊರು ಬಿಡಬೇಕಾಗುತ್ತದೆ. ಅವರಿಬ್ಬರ ಜತೆಗೆ ದೀಪಾ (ಗೌರಿ ನಾಯರ್) ಎಂಬ ಹುಡುಗಿಯೂ ಸೇರಿಕೊಳ್ಳುತ್ತಾಳೆ. ಆ ನಂತರ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ.
ಕಥೆಯೇನೂ ಕೇಳುವುದಕ್ಕೆ ಚೆನ್ನಾಗಿದೆ ಮತ್ತು ಚಿತ್ರ ನೋಡುವುದಕ್ಕೆ ಆಸಕ್ತಿ ಹುಟ್ಟಿಸುವಂತಿದೆ. ಆದರೆ, ಈ ಚಿತ್ರದ ದೊಡ್ಡ ಮೈನಸ್ ಪಾಯಿಂಟ್ ಎಂದರೆ, ಅದು ತಾರಾಗಣ. ಚಿತ್ರದಲ್ಲಿ ನಟಿಸಿದವರೆಲ್ಲ ಹೊಸಬರೇ. ಈ ಪೈಕಿ ಲೋಕೇಂದ್ರ ಸೂರ್ಯ ಒಬ್ಬರನ್ನು ಹೊರತುಪಡಿಸಿದರೆ ಒಬ್ಬರಿಗೂ ಗಮನಸೆಳೆಯುವುದಕ್ಕಾಗಿಲ್ಲ. ಒಂದು ವಿಚಿತ್ರವಾದ ಪಾತ್ರವನ್ನು ಒಪ್ಪಿಕೊಂಡಿರುವ ಸೂರ್ಯ, ಅದಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಯಶಸ್ವಿಯಾಗಿದ್ದಾರೆ. ಅವರ ಮ್ಯಾನರಿಸಂ, ವಿಪರೀತ ಎನಿಸುವಷ್ಟು ಮಾತು ಕೆಲವೊಮ್ಮೆ ಕಿರಿಕಿರಿಯಾಗುವುದುಂಟು. ಅವರು ಸ್ವಲ್ಪ ಹೊತ್ತಾದರೂ ಬಾಯಿ ಮುಚ್ಚಿದರೂ ಸಾಕು ಎಂದನಿಸುವುದುಂಟು. ಆದರೂ ಚಿತ್ರದಲ್ಲೇನಾದರೂ ಗಮನ ಸೆಳೆಯುವ ಅಂಶವಿದೆ ಎಂದರೆ ಅದು ಲೋಕೇಂದ್ರ ಸೂರ್ಯ ಮಾತ್ರ. ಹಾಗಂತ ಅವರು ಬರೀ ನಟನೆಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಮತ್ತು ಅಲ್ಲೂ ತಕ್ಕ ಮಟ್ಟಿಗೆ ಪ್ರತಿಭೆ ತೋರಿಸಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಆಸ್ಕರ್ ಕೃಷ್ಣ, ತೆರೆಯ ಮೇಲೆ ಬೆದರಿದವರಂತೆ ಕಾಣುತ್ತಾರೆ. ಮೊದಲ ಬಾರಿಗೆ ನಟನೆ ಮಾಡುತ್ತಿರುವುದರಿಂದ, ಇದು ಸಹಜವಿರಬಹುದು. ಆದರೆ, ಬೇರೆಯವರನ್ನು ತಿದ್ದುವ ಜವಾಬ್ದಾರಿಯನ್ನೂ ಅವರು ಪೂರ್ತಿಯಾಗಿ ನಿಭಾಯಿಸಿದಂತೆ ಕಾಣುವುದಿಲ್ಲ. ಪಾತ್ರಧಾರಿಗಳೆಲ್ಲ ರೋಬೋಟ್ಗಳಂತೆ ಕಾಣುತ್ತಾರೆ. ಅವರ ತುಟಿ ಚಲನೆಗೂ, ಸಂಭಾಷಣೆಗೂ ಸಂಬಂಧವೇ ಇಲ್ಲ. ಇನ್ನು, ತಾಂತ್ರಿಕವಾಗಿಯೂ ಚಿತ್ರ ನೀರಸವಾಗಿದೆ. ಅದೇನು ಚಿತ್ರಮಂದಿರದ ಸಮಸ್ಯೆಯೋ, ಚಿತ್ರದ್ದೇ ಸಮಸ್ಯೆಯೋ ಗೊತ್ತಿಲ್ಲ. ಒಟ್ಟಾರೆ, ಎಲ್ಲವೂ ಮಸುಕು ಮಸುಕು. ಬೆಳಕಿನ ಸನ್ನಿವೇಶಗಳೇ ಡಲ್ ಆಗಿವೆ. ಇನ್ನು, ರಾತ್ರಿಯ ಚಿತ್ರೀಕರಣವಂತೂ ಕಾಣುವುದೇ ಕಷ್ಟ. ಹಾಗೆ ನೋಡಿದರೆ, ಚಿತ್ರ ದೊಡ್ಡದೇನಲ್ಲ. 110 ನಿಮಿಷದ ಅವಧಿಯ ಈ ಚಿತ್ರದಲ್ಲಿ ಗಡಾರಿಯ ರಾಸಲೀಲೆಯ ದೃಶ್ಯಗಳನ್ನು ಮತ್ತು ಒಂದಿಷ್ಟು ಮಾತುಗಳನ್ನು ಕತ್ತರಿಸಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂದು ಪ್ರೇಕ್ಷಕರನಿಗೆ ಅನಿಸುವುದು ಸಹಜ.
ಇದೆಲ್ಲದರ ಮಧ್ಯೆಯೂ, ಈ ಚಿತ್ರಕ್ಕೆ ಒಂದೊಳ್ಳೆಯ ಚಿತ್ರವಾಗುವ ಲಕ್ಷಣಗಳಿದ್ದವು. ಒಂದಿಷ್ಟು ಥ್ರಿಲ್ಲಿಂಗ್ ಅಂಶಗಳು, ಒಳ್ಳೆಯ ಅಭಿನಯ, ತಾಂತ್ರಿಕ ಗುಣಮಟ್ಟ ... ಇವೆಲ್ಲವೂ ಇದ್ದಿದ್ದರೆ ಒಳ್ಳೆಯ ಚಿತ್ರವಾಗುತ್ತಿತ್ತೇನೋ. ಆದರೆ, ವಿಧಿ ಕಡ್ಡಿ ಅಲ್ಲಾಡಿಸಿದ್ದರಿಂದ, ಆ ಅವಕಾಶ ಮಿಸ್ ಆಗಿದೆ.