

ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಸಾಲುಸಾಲು ಸ್ಟಾರ್ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳಲ್ಲಿ ಬಗೆಬಗೆ ಪಾತ್ರಗಳನ್ನು ನಿಭಾಯಿಸುತ್ತಿರುವ ಅವರು, ವೃತ್ತಿಜೀವನದ ಏರುಗತಿಯಲ್ಲಿರುವಾಗಲೇ ಭವಿಷ್ಯದ ಕನಸಿನ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಲ್ಲ ಒಂದು ಪೋಸ್ಟ್ ಹಾಕುತ್ತಾ ಅಭಿಮಾನಿಗಳಿಂದ ಲಕ್ಷಾಂತರ ಲೈಕ್ಸ್ ಮತ್ತು ಸಾವಿರಾರು ಕಮೆಂಟ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಬಯೋಪಿಕ್ನಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಟಿಸಿದರೆ ಸೌಂದರ್ಯ ಅವರ ಬಯೋಪಿಕ್ನಲ್ಲಿಯೇ ಕಾಣಿಸಿಕೊಳ್ಳುವೆ ಎಂದಿದ್ದಾರೆ. ‘ನಾನು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ, ನನ್ನ ತಂದೆ ನೀನು ನೋಡಲು ನಟಿ ಸೌಂದರ್ಯ ಅವರನ್ನೇ ಹೋಲುತ್ತೀಯಾ ಎನ್ನುತ್ತಿದ್ದರು. ಚಿತ್ರರಂಗದಲ್ಲಿ ಅವರ ಸಾಧನೆ ದೊಡ್ಡದು. ಹಾಗಾಗಿ ಅವರ ಬಯೋಪಿಕ್ನಲ್ಲಿ ನಟಿಸಲು ಬಯಸುತ್ತೇನೆ’ ಎಂದಿದ್ದಾರೆ ರಶ್ಮಿಕಾ.
ಈ ಹಿಂದೆ ‘ನಾನು ಯಾರ ಬಯೋಪಿಕ್ನಲ್ಲಿ ನಟಿಸಬೇಕು? ಶ್ರೀದೇವಿನಾ ಅಥವಾ ಸೌಂದರ್ಯನಾ?’ ಎಂಬ ಪ್ರಶ್ನೆಯನ್ನು ನೇರವಾಗಿ ಅಭಿಮಾನಿಗಳ ಮುಂದಿಟ್ಟಿದ್ದರು. ಆವತ್ತು ಶ್ರೀದೇವಿ ಬಯೋಪಿಕ್ ಮಾಡಿ ಎಂಬ ಉತ್ತರವೇ ಹೆಚ್ಚು ಬಂದಿದ್ದರಿಂದ, ಅದನ್ನೇ ಮಾಡುವುದಾಗಿ ಹೇಳಿದ್ದರು. ಇದೀಗ ಸೌಂದರ್ಯ ಜೀವನ ಆಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ತಮಗಿಷ್ಟ ಎಂದಿದ್ದಾರೆ.