

ಮುಂಬೈ: ಬಾಕ್ಸ್ ಆಫೀಸ್ ಕಿಂಗ್ ರಜನಿಕಾಂತ್ ಅವರು ಇಂದು 70 ವರ್ಷಗಳನ್ನು ಮುಗಿಸಿ, 71ಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹುಟ್ಟುಹಬ್ಬಕ್ಕೆ ರಜನಿಕಾಂತ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ, ಎ.ಆರ್. ರೆಹಮಾನ್, ಸುಮಲತಾ ಅಂಬರೀಶ್, ಸುನೀಲ್ ಶೆಟ್ಟಿ, ದುಲ್ಕರ್ ಸಲ್ಮಾನ್, ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ರಜನಿಕಾಂತ್ ಅವರಿಗೆ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಕೋರಿದ್ದಾರೆ. ಇನ್ನು ರಜನಿಕಾಂತ್ ಅವರ ಅಭಿಮಾನಿಗಳು ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇನ್ನು ಎ.ಆರ್. ರೆಹಮಾನ್ ಅವರು ಈ ಸಿಡಿಪಿಯನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿರುವ ರಜನಿಕಾಂತ್, ಡಿಸೆಂಬರ್ 31ರಂದು ತಮ್ಮ ಪಕ್ಷದ ಹೆಸರನ್ನು ಅಧಿಕೃತವಾಗಿ ತಿಳಿಸುವುದಾಗಿ ಹೇಳಿದ್ದಾರೆ. ಇನ್ನು ಮುಂದಿನ ವರ್ಷ ಅವರ ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬರಲಿದ್ದು, 2021ರಲ್ಲಿ ನಡೆಯಲಿರುವ ತಮಿಳು ನಾಡು ವಿಧಾನಸಭೆಯ ಚುನಾವಣೆಗಳಲ್ಲಿ ರಜನಿಕಾಂತ್ ಅವರ ಪಕ್ಷ ಸ್ಪರ್ಧಿಸುವುದಷ್ಟೇ ಅಲ್ಲ, ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು, 'ಅಣ್ಣಾತ್ತೈ' ಎಂಬ ಚಿತ್ರದಲ್ಲಿ ರಜನಿಕಾಂತ್ ಅವರು ಸದ್ಯ ನಟಿಸುತ್ತಿದ್ದು, ಆ ಚಿತ್ರದ ನಂತರ ಅವರು ನಟನೆ ಮುಂದುವರೆಸುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವವಾಗಿದೆ. ರಜನಿಕಾಂತ್ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಅವರು ಚಿತ್ರರಂಗದಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಆ ನಂತರವೂ ರಜನಿಕಾಂತ್ ಅವರು ನಟನೆ ಮುಂದುವರೆಸುತ್ತಾರಾ ಅಥವಾ 'ಅಣ್ಣಾತ್ತೈ' ಅವರ ಕೊನೆಯ ಚಿತ್ರವಾಗುತ್ತದಾ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇದೆ.
ಇದನ್ನೂ ಓದಿ: ‘ಮಾರಿ ಗೋಲ್ಡ್’ ಚಿತ್ರದ ಚಿತ್ರೀಕರಣ ಮುಗೀತು …
ಆದರೆ, ರಜನಿಕಾಂತ್ ಈ ಬಗ್ಗೆ ಯಾವುದೇ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಮೊದಲಿಗೆ ಮುನ್ನ 'ಅಣ್ಣಾತ್ತೈ' ಚಿತ್ರವನ್ನು ಅಚ್ಚುಕಟ್ಟಾಗಿ ಮುಗಿಸಿಕೊಡಬೇಕು ಎಂಬುದು ಅವರ ಯೋಚನೆ. ಈ ನಿಟ್ಟಿನಲ್ಲಿ ಅವರು ಹೆಜ್ಜೆ ಇಟ್ಟಿದ್ದು, ಆದಷ್ಟು ಬೇಗ ಚಿತ್ರದಲ್ಲಿನ ತಮ್ಮ ಕೆಲಸಗಳನ್ನು ಮುಗಿಸುವುದಕ್ಕೆ ಮುಂದಾಗಿದ್ದಾರೆ.