ಸುಶಾಂತ್​ ಪ್ರೇಯಸಿ ವಿರುದ್ಧವೂ ದಾಖಲಾಯ್ತು ಕೇಸ್​!

Rhea
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಚುರುಕುಗೊಳಿಸಿದ್ದು, ಸುಶಾಂತ್​ ಪ್ರೇಯಸಿ ಎಂದೇ ಹೇಳಲಾಗದ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಮುಜಾಫರ್​ಪುರ್ ಕೋರ್ಟ್​​ನಲ್ಲಿ ಕೇಸ್​ ದಾಖಲಾಗಿದೆ. ಸುಶಾಂತ್​ ಆತ್ಮಹತ್ಯೆಗೆ ಪರೋಕ್ಷವಾಗಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಕುಂದನ್​ ಕುಮಾರ್ ಎಂಬುವವರು ಕೋರ್ಟ್​ನಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಜೂನ್ 24ರಂದು ವಿಚಾರಣೆ ಸಹ ನಡೆಯಲಿದೆ.

ಸುಶಾಂತ್ ಸಾವಿನ ಬೆನ್ನಲ್ಲೇ ಪ್ರೇಯಸಿ ಎಂದೇ ಹೇಳಲಾಗಿದ್ದ ರಿಯಾ ಚಕ್ರವರ್ತಿ ಅವರನ್ನು ಗುರುವಾರ ಬಾಂದ್ರಾ ಪೊಲೀಸರು ವಿಚಾರಣೆಗೆ ಕರೆದಿದ್ದರು. ಸುಮಾರು 09 ಗಂಟೆಗಳ ಕಾಲ, ವಿಚಾರಣೆ ನಡೆಸಿ ಮಹತ್ವದ ವಿಷಯಗಳನ್ನು ಸಂಗ್ರಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸುಶಾಂತ್​ಗೆ ಬಹಳ ಹತ್ತಿರವಾಗಿದ್ದವರೆಂದರೆ, ಅದು ರಿಯಾ ಚಕ್ರವರ್ತಿ. ಇಬ್ಬರೂ ಜತೆಯಾಗಿದ್ದಷ್ಟೇ ಅಲ್ಲ, ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಅದೇ ಕಾರಣಕ್ಕೆ ರಿಯಾ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಲಾಗಿತ್ತು. ಇಬ್ಬರ ನಡುವೆ ಸಣ್ಣ ಮುನಿಸು ಏರ್ಪಟ್ಟಿದ್ದಾಗಿ ರಿಯಾ ಹೇಳಿಕೊಂಡಿದ್ದರು.

ಇನ್ನು ನಟ ಕಮಲ್​ ಆರ್​ ಖಾನ್​ ಇತ್ತೀಚೆಗಷ್ಟೇ ಬಾಲಿವುಡ್ ಆಳುತ್ತಿರುವ ಕೆಲ ನಿರ್ಮಾಣ ಕಂಪನಿಗಳ ಬಗ್ಗೆ ಟ್ವಿಟ್​ ಮಾಡಿದ್ದರು. ಅದರಲ್ಲಿ ಸಲ್ಮಾನ್​ ಖಾನ್​ ಫಿಲಂಸ್​, ಕರಣ್​ ಜೋಹರ್​ ಒಡೆತನದ ಧರ್ಮ ಪ್ರೊಡಕ್ಷನ್ಸ್ ಮತ್ತು ಯಶ್​ ರಾಜ್​ ಫಿಲಂಸ್​ ಕಂಪನಿಗಳು ಸುಶಾಂತ್​ ಸಿಂಗ್​ ಸಿನಿಮಾ ಬ್ಯಾನ್​ ಮಾಡಿದ್ದವು. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು.

ಬಾಲಿವುಡ್​ನಲ್ಲಿ ಸುಶಾಂತ್​ಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಈ ರೀತಿ ಮಾಡಿದ್ದರಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದರು. ‘ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net