ರಚಿತಾ ರಾಮ್​ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್‌ ದಾಖಲು!

Rachita Ram
Published on

ಬೆಂಗಳೂರು: ರಚಿತಾ ರಾಮ್​ಗೆ ವಿವಾದಗಳು ಹೊಸದೇನಲ್ಲ. ಈಗಾಗಲೇ ಅವರು ಸಾಕಷ್ಟು ವಿವಾದಗಳಿಗೆ ಸಿಲುಕಿದ್ದಾರೆ. ಅದನ್ನೆಲ್ಲ ದಾಟಿ ಅವರು ಹೊರಬಂದಿದ್ದಾರೆ. ಈಗ ಅವರು ಇನ್ನೊಂದು ವಿವಾದಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕೇಸ್​ ಸಹ ದಾಖಲಾಗಿದೆ.

ರಚಿತಾ ಅಭಿನಯದ 'ಕ್ರಾಂತಿ' ಚಿತ್ರವು ಇದೇ ತಿಂಗಳು 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಸಂಭ್ರಮದಲ್ಲಿರುವ ರಚಿತಾ ಒಂದು ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, 'ಜನವರಿ 26 ಎಂದಾಕ್ಷಣ ಗಣರಾಜ್ಯೋತ್ಸವ ನೆನಪಿಗೆ ಬರುತ್ತದೆ. ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತುಬಿಡಿ. ಅಂದು 'ಕ್ರಾಂತಿ' ಉತ್ಸವ ಅಷ್ಟೇ. ಬಂದು ಸಿನಿಮಾ ನೋಡಿ ಎಂದು ನಾನು ನಿಮಗೆ ಆಹ್ವಾನ ಕೊಡುವುದಿಲ್ಲ. ಏಕೆಂದರೆ, ಸಿನಿಮಾ ನೋಡಬೇಕು ಎಂದು ನೀವು ಈಗಾಗಲೇ ನಿರ್ಧಾರ ಮಾಡಿದ್ದೀರಾ' ಎಂದಿದ್ದರು.

ರಚಿತಾ ಅವರ ಈ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈಗ ಅವರ ವಿರುದ್ಧ ಕೇಸ್​ ದಾಖಲಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಮದ್ದೂರಿನ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಈ ಕುರಿತು ಮದ್ದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿರುವ ರಚಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ದೂರಿನಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net