

ಮುಂಬೈ: ಒಂದು ಕಾಲಕ್ಕೆ ಬಾಲಿವುಡ್ನ ಜನಪ್ರಿಯ ನಾಯಕಿಯರಲ್ಲಿ ರವೀನಾ ಟಂಡನ್ ಸಹ ಒಬ್ಬರು. 90ರ ದಶಕದಲ್ಲಿ ಆಗಿನ ಹಲವು ಜನಪ್ರಿಯ ನಾಯಕರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸಲ್ಮಾನ್ ಖಾನ್ ಸೇರಿದಂತೆ ಹಲವರೊಂದಿಗೆ ನಟಿಸಿದ್ದರು. ಮದುವೆಯಾಗಿ ಹಲವು ವರ್ಷಗಳ ಗ್ಯಾಪ್ನ ನಂತರ ಮತ್ತೊಮ್ಮೆ 'ಕೆಜಿಎಫ್ 2' ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು.
ವಿಷಯ ಇರುವುದು ರವೀನಾ ಟಂಡನ್ ಕುರಿತಲ್ಲ. ಅವರ ಮಗಳು ರಾಶಾ ಕುರಿತು. ಇದುವರೆಗೂ ಓದಿನಲ್ಲಿ ಬ್ಯುಸಿಯಾಗಿದ್ದ ರಾಶಾ, ಈಗ ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಸದ್ಯದಲ್ಲೇ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, ರಾಶಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರದ ಹೆಸರು ಬಹಿರಂಗವಾಗಿಲ್ಲ. ಈ ಚಿತ್ರದಲ್ಲಿ ಅಜಯ್ ದೇವಗನ್ ಸಂಬಂಧಿ ಅಮಾನ್ ದೇವಗನ್ ನಾಯಕನಾಗಿ ಬಾಲಿವುಡ್ಗೆ ಪರಿಚಿತನಾಗುತ್ತಿದ್ದು, ಈ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅಜಯ್ ದೇವಗನ್ ಸಹ ಅತಿಥಿ ಕಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಭಿಷೇಕ್ ಕಪೂರ್ ಈ ಹಿಂದೆ ಫರ್ಹಾನ್ ಅಖ್ತರ್, ರಾಜ್ಕುಮಾರ್ ರಾವ್, ಸಾರಾ ಅಲಿ ಖಾನ್ ಮುಂತಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅಭಿಷೇಕ್ ಅವರಿಂದ ಪರಿಚಿತರಾದವರೆಲ್ಲ ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ರಾಶಾ ಕೂಡಾ ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡುತ್ತಾರಾ? ಎಂದು ಕಾದು ನೋಡಬೇಕಿದೆ.