ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಫುಲ್​ ಡಿಮ್ಯಾಂಡ್!

Ajaneesh Lokanath
Published on

ಹೈದರಾಬಾದ್​: ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​ ಏರ್ಪಟ್ಟಿದೆ. 'ಕಾಂತಾರ' ಚಿತ್ರದ ಯಶಸ್ಸಿನ ನಂತರ, ಅವರಿಂದ ಸಂಗೀತ ಸಂಯೋಜನೆ ಮಾಡಿಸುವವರ ಸಂಖ್ಯೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ.

ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕದ ಮೇಲಾಗಿದೆ. 'ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಅವರು ಆರಂಭದ ಕೆಲವು ವರ್ಷಗಳಲ್ಲಿ ಅವಕಾಶಗಳಿಗಾಗಿ ಸ್ವಲ್ಪ ಕಾಯಬೇಕಾಯಿತು. 'ಉಳಿದವರು ಕಂಡಂತೆ' ಯಶಸ್ವಿಯಾದ ನಂತರ ಅಜನೀಶ್​ ಕನ್ನಡದಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕರಾದರು. 'ರಂಗಿತರಂಗ', 'ಕಿರಿಕ್​ ಪಾರ್ಟಿ', 'ಬೆಲ್​ ಬಾಟಂ', 'ರತ್ನನ್​ ಪ್ರಪಂಚ', 'ಕಾಂತಾರ' ಮುಂತಾದ ಹಿಟ್​ ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು. ಕಳೆದ ವರ್ಷ ಬಿಡುಗಡೆಯಾದ 'ಕಾಂತಾರ' ಮತ್ತು 'ವಿಕ್ರಾಂತ್ ರೋಣ' ತೆಲುಗಿಗೆ ಡಬ್​ ಆಗಿ, ಟಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ.

ಅಜನೀಶ್ ಲೋಕನಾಥ್​ ಈಗಾಗಲೇ 'ವಿರೂಪಾಕ್ಷ' ಎಂಬ ತೆಲುಗು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೆ, ಅಜಯ್​ ಭೂಪತಿ ನಿರ್ದೇಶನದ ಹೊಸ ತೆಲುಗು ಚಿತ್ರಕ್ಕೂ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಇನ್ನೊಂದಿಷ್ಟು ತೆಲುಗು ಚಿತ್ರಗಳ ಆಫರ್​ ಅಜನೀಶ್​ಗೆ ಇದೆಯಂತೆ.

ಅಂದಹಾಗೆ, ಕನ್ನಡದಲ್ಲಿ ಅಜನೀಶ್​ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿರುವ 'ರಾಘವೇಂದ್ರ ಸ್ಟೋರ್ಸ್​', 'ಹಾಸ್ಟಲ್​ ಹುಡುಗರು ಬೇಕಾಗಿದ್ದಾರೆ', 'ವಾಮನ', 'ಕೈವ', 'ಬಘೀರ' ಮುಂತಾದ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net