

ಬೆಂಗಳೂರು: ಕಳೆದ ವರ್ಷದ ಸೂಪರ್ ಹಿಟ್ ಚಿತ್ರವಾದ 'ಕಾಂತಾರ'ದ ಮುಂದಿನ ಭಾಗ ಬರುತ್ತದೆ ಎಂಬ ಮಾತು ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅಷ್ಟೇ ಅಲ್ಲ, ಚಿತ್ರತಂಡದವರು 'ಕಾಂತಾರ 2' ಚಿತ್ರ ಮಾಡುವುದಕ್ಕೆ ಅಣ್ಣಪ್ಪ ಸ್ವಾಮಿಯ ಅಪ್ಪಣೆಯನ್ನೂ ಕೇಳಿದ ಸುದ್ದಿ ಇತ್ತು.
ಈಗ 'ಕಾಂತಾರ 2' ಚಿತ್ರ ಆಗುವುದು ಖಂಡಿತಾ ಎಂದು ಚಿತ್ರದ ನಿರ್ಮಾಪಕ ವಿಜಯ್ ಕುಮಾರ್ ಹೇಳಿಕೊಂಡಿದ್ದಾರೆ. ಈ ವರ್ಷದ ಜೂನ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ, ಮುಂದಿನ ವರ್ಷ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಜನಪ್ರಿಯ ಸಿನಿಮಾ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ರಿಷಬ್ ಸದ್ಯ ತಮ್ಮ ತಂಡದವರೊಂದಿಗೆ ಕುಳಿತು ಕಥೆ ಬರೆಯುತ್ತಿದ್ದಾರೆ. ಈ ಕುರಿತು ಸಾಕಷ್ಟು ರೀಸರ್ಚ್ ಸಹ ಮಾಡುತ್ತಿದ್ದಾರೆ. ಬಹುಶಃ ಜೂನ್ನಲ್ಲಿ ಚಿತ್ರ ಪ್ರಾರಂಭವಾಗಿದೆ. ಚಿತ್ರದ ಒಂದು ಭಾಗ ಮಳೆಯಲ್ಲಿ ನಡೆಯುವುದರಿಂದ, ಮಳೆಕಾಲದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ' ಎಂದು ಅವರು ಹೇಳಿಕೊಂಡಿದ್ದಾರೆ. 'ಕಾಂತಾರ 2' ಚಿತ್ರವು 'ಕಾಂತಾರ'ದ ಮುಂದಿನ ಭಾಗವಾಗವಿರುವುದಕ್ಕಿಂತ, ಅದಕ್ಕಿಂತ ಹಿಂದಿನ ಕಥೆಯಾಗಿರುತ್ತದೆಂತೆ.
'ಕಾಂತಾರ' ಚಿತ್ರವು ಸೆ. 30ರಂದು ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಇಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿತ್ರವನ್ನು ಬೇರೆ ಭಾಷೆಗಳಿಗೂ ಡಬ್ ಮಾಡಲಾಯಿತು. ಚಿತ್ರವು ಒಟ್ಟಾರೆ 400 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕನ್ನಡದಲ್ಲೇ ಈ ಚಿತ್ರವು 170 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ರಿಷಬ್ ಜತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದರು.