

ನವದೆಹಲಿ: ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಸತತ ನಾಲ್ಕನೇ ತ್ರೖೆಮಾಸಿಕದಲ್ಲಿ ಇಳಿಕೆಯಾಗಿದ್ದು, 2022ರ ಜೂನ್ ತ್ರೖೆಮಾಸಿಕದಲ್ಲಿ ಶೇ. 7.6ಕ್ಕೆ ಇಳಿದಿದೆ. ಹಿಂದಿನ ವರ್ಷದ ಜೂನ್ ತ್ರೖೆಮಾಸಿಕದಲ್ಲಿ ಈ ದರವು ಶೇ. 14.3 ಇತ್ತು. ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಮಾಸಿಕ ಆರ್ಥಿಕ ಅಂಕಿ-ಅಂಶದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ಕೋವಿಡ್ ಸಾಂಕ್ರಾಮಿಕ ಆರಂಭಿಕ ಅವಧಿಯಲ್ಲಿ ಮತ್ತು ನಂತರದಲ್ಲಿ ತೆಗೆದುಕೊಂಡ ಕ್ರಮಗಳು ಉದ್ಯೋಗ ಮಟ್ಟವನ್ನು ಹೆಚ್ಚಿಸುವಲ್ಲಿ ಫಲಪ್ರದವಾಗುತ್ತಿವೆ. ಹೀಗಾಗಿ ನಿರುದ್ಯೋಗ ದರವು ಈಗ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕಡಿಮೆಯಾಗಿದೆ. 2022ರ ಜೂನ್ ತ್ರೖೆಮಾಸಿಕದಲ್ಲಿ ಹೊಸ ಉದ್ಯೋಗ ಸೇರ್ಪಡೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದ್ವಿಗುಣಗೊಂಡಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ದತ್ತಾಂಶ ಆಧರಿಸಿ ಈ ಅಂದಾಜು ಮಾಡಲಾಗಿದೆ. ನರೇಗಾ ಅಡಿಯಲ್ಲಿ ಕೆಲಸದ ಬೇಡಿಕೆಯು ಕ್ಷೀಣಿಸುತ್ತಿದ್ದು, 2 ವರ್ಷಗಳ ಇದೇ ಅವಧಿಗೆ ಹೋಲಿ ಸಿದರೆ 2022ರ ಆಗಸ್ಟ್ನಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರದಲ್ಲಿ ಕಡಿತವಾಗಿರುವ ಸಾಧ್ಯತೆ ಯನ್ನು ಇದು ಸೂಚಿಸುತ್ತದೆ. ಕೃಷಿ ಮತ್ತು ಕೃಷಿಯೇತರ ಚಟು ವಟಿಕೆಗಳು ಹೆಚ್ಚಾಗಿರುವುದೇ ನಿರುದ್ಯೋಗ ದರ ಕುಸಿತಕ್ಕೆ ಕಾರಣವಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿದ ಉದ್ಯೋಗಾವಕಾಶಗಳ ಪರಿಣಾಮವಾಗಿ ಹಿಮ್ಮುಖ ವಲಸೆಯ ಅಂತ್ಯಕ್ಕೂ ಕಾರಣವಾಗಿದೆ ಎಂದು ವಿಮರ್ಶೆ ಹೇಳಿದೆ.
2022-23ರಲ್ಲಿ ಆರ್ಥಿಕತೆಯು ಶೇ. 7.2 ರ ದರದಲ್ಲಿ ಬೆಳೆಯುವ ನಿರೀಕ್ಷೆ ಇದೆ. 2022ರ ಮೊದಲ ತ್ರೖೆಮಾಸಿಕದಲ್ಲಿ ಅತಿಹೆಚ್ಚು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಪಡೆದುಕೊಂಡ ಮುಂಚೂಣಿ ರಾಷ್ಟ್ರಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದ ಬೆಳವಣಿಗೆಯ ದೃಷ್ಟಿಕೋನ, ಉದ್ಯಮ ಸ್ನೇಹಿ ವಾತಾವರಣ, ಸುಧಾರಣೆ ಮತ್ತು ಸರ್ಕಾರಿ ನೀತಿಗಳ ಬೆಂಬಲದ ಕಾರಣಗಳು ದೇಶವನ್ನು ಆಕರ್ಷಕ ವ್ಯಾಪಾರ ತಾಣವನ್ನಾಗಿ ಮಾಡಿದೆ. 16.1 ಶತಕೋಟಿ ಡಾಲರ್ (1,28,800 ಕೋಟಿ ರೂಪಾಯಿ) ಒಳಹರಿವಿನೊಂದಿಗೆ ಇದೇ ವೇಗವು 2022ರ ಎರಡನೇ ತ್ರೖೆಮಾಸಿಕದಲ್ಲೂ ಮುಂದುವರಿದಿದೆ.
ಜಾಗತಿಕ ಮಂದಗತಿಯ ಹೊರತಾಗಿಯೂ ಈ ತ್ರೖೆಮಾಸಿಕದಲ್ಲಿ ಭಾರತದ ರಫ್ತು ಎರಡನೇ ಅತ್ಯಧಿಕ ದರದಲ್ಲಿ ಬೆಳೆದಿದೆ. ಇದು ಭಾರತೀಯ ಸರಕುಗಳಿಗೆ ಇರುವ ಬಲವಾದ ಬೇಡಿಕೆಯನ್ನು ಸೂಚಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಇತರ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ವಿದೇಶೀ ವಿನಿಮಯ ಮೀಸಲು ದೊಡ್ಡ ಪ್ರಮಾಣದಲ್ಲಿದೆ. ಒಂಬತ್ತು ತಿಂಗಳಿಗೆ ಅಗತ್ಯವಾದಷ್ಟು ಆಮದುಗಳನ್ನು ಸರಿದೂಗಿಸುವಷ್ಟು ಮೀಸಲು ಇದಾಗಿದೆ. ಜಗತ್ತಿನ ಬಹುತೇಕ ದೇಶಗಳಿಗೆ ಹೋಲಿಸಿದರೆ ಈ ಮೀಸಲು ಸಾಕಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.
ಸಾಮರ್ಥ್ಯ ಹೆಚ್ಚಳ: ಗ್ರಾಹಕರ ಖರೀದಿ ಸಾಮರ್ಥ್ಯ ಮತ್ತು ಉದ್ಯೋಗದಲ್ಲಿ ಏರುಗತಿ ಇರುವುದರಿಂದ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಖಾಸಗಿ ವಲಯದ ಬಂಡವಾಳ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆ ಇದೆ. ಸರ್ಕಾರಕ್ಕೆ ಬರುವ ತೆರಿಗೆ ಆದಾಯದ ಬೆಳವಣಿಗೆ ಆಗಲಿದೆ ಎಂದು ವರದಿ ಹೇಳಿದೆ.
ಆರ್ಬಿಐ ಮುನ್ಸೂಚನೆ: ದೇಶದ ಚಾಲ್ತಿ ಖಾತೆ ಕೊರತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ ಶೇ. 3ರ ಒಳಗೆ ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮುನ್ಸೂಚನೆ ನೀಡಿರುವುದು ಉತ್ತಮ ಸೂಚನೆಯಾಗಿದೆ. ತನ್ನ ವಿದೇಶಿ ವಿನಿಮಯ ಮೀಸಲು ಮಟ್ಟವನ್ನು ಕಾಪಾಡಿಕೊಂಡು ಭಾರತವು ಉತ್ತಮ ಸ್ಥಿತಿಯಲ್ಲಿದೆ. ದೇಶದಲ್ಲಿ ಹಣದುಬ್ಬರದ ಒತ್ತಡಗಳು ಇಳಿಮುಖವಾಗುತ್ತಿರುವಂತೆ ತೋರುತ್ತಿದೆ ಎಂದು ಆರ್ಬಿಐ ಶುಕ್ರವಾರ ಹೇಳಿದೆ. ಆದರೆ, ಇಂಧನ ಭದ್ರತೆಯತ್ತ ಎಲ್ಲರ ಚಿತ್ತ ಇದೆ. ಭಾರತಕ್ಕೆ ಇಂಧನ ಅಗತ್ಯತೆಯನ್ನು ಚಾಣಾಕ್ಷ ರೀತಿಯಲ್ಲಿ ನಿಭಾಯಿಸುವ ಪರೀಕ್ಷೆ ಎದುರಾಗಲಿದೆ ಎಂದು ಆರ್ಬಿಐ ಹೇಳಿದೆ.
ರೂಪಾಯಿಯಲ್ಲೇ ವಿದೇಶಿ ವ್ಯಾಪಾರ: ಅಮೆರಿಕ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಬಲಪಡಿಸುವ ಜತೆಗೆ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳನ್ನು ಸುಗಮಗೊಳಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ರೂಪಾಯಿ ಮೂಲಕವೂ ವಿದೇಶಗಳ ಜತೆ ವಹಿವಾಟು ನಡೆಸಲು ಭಾರತದ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರ ಇನ್ವಾಯ್ಸ್ (ಸರಕುಪಟ್ಟಿ), ಪಾವತಿ ಮತ್ತು ಇತ್ಯರ್ಥವನ್ನು ಭಾರತೀಯ ರೂಪಾಯಿಯಲ್ಲಿ ಮಾಡಲು ಅನುಮತಿ ನೀಡಲಾಗಿದೆ. ವಾಣಿಜ್ಯ ಸಚಿವಾಲಯದ ಅಡಿಯಲ್ಲಿರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಈ ಅಧಿಸೂಚನೆ ಹೊರಡಿಸಿದ್ದು, 2022ರ ಜುಲೈ 11ರಂದು ಹೊರಡಿಸಲಾದ ಆರ್ಬಿಐ ಸುತ್ತೋಲೆ ಅನುಸಾರ ಭಾರತೀಯ ರೂಪಾಯಿಯಲ್ಲಿಯೇ ವಿಶೇಷ ಖಾತೆಗಳ ಮೂಲಕ ವಿದೇಶಿ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಹೇಳಿದೆ. ರೂಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಇನ್ವಾಯ್ಸ್ ಮತ್ತು ಪಾವತಿಗಳನ್ನು ಅನುಮತಿಸಲಾಗುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ ಎಲ್ಲಾ ರಫ್ತು ಮತ್ತು ಆಮದುಗಳನ್ನು ರೂಪಾಯಿಯಲ್ಲಿ ಮಾಡಬಹುದು ಮತ್ತು ಇನ್ವಾಯ್ಸ್ ಮಾಡಬಹುದು ಎಂದು ಆರ್ಬಿಐ ಹೇಳಿದೆ.