ಕೆಲಸ ಇಲ್ಲದೆ ಕಿರುತೆರೆಯತ್ತ ಹೊರಟರೆ ಬ್ರಹ್ಮಾನಂದಂ?

Bramhanandam - Final
Published on

ಟಾಲಿವುಡ್​ನಲ್ಲಿ 'ಕಿಂಗ್​ ಆಫ್​ ಕಾಮಿಡಿ' ಎಂದೇ ಜನಪ್ರಿಯರಾದವರು ಬ್ರಹ್ಮಾನಂದಂ. ಭಾರತೀಯ ಚಿತ್ರರಂಗದಲ್ಲಿ ಸಾವಿರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಗಿನ್ನೀಸ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ಗೆ ದಾಖಲಾದವರು ಅವರು. ಇದೀಗ ಅವಕಾಶಗಳು ಕಡಿಮೆಯಾಗಿ ಅವರು ಕಿರುತೆರೆಗೆ ಹೋಗುತ್ತಿದ್ದಾರೆ ಎಂಬ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಎರಡು ದಿನಗಳಿಂದ ಬಹಳ ಕೇಳಿ ಬರುತ್ತಿದೆ.

80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ಬ್ರಹ್ಮಾನಂದಂ ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಟೈಮಿಂಗ್​ನಿಂದ ಬೇಡಿಕೆಯ ಕಾಮಿಡಿ ನಟರಾದರು. ಒಂದು ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ, ಅವರು ಪ್ರತಿ ಚಿತ್ರದಲ್ಲೂ ಇರಲೇಬೇಕು ಎನ್ನವಷ್ಟು ಅನಿವಾರ್ಯವಾಗಿತ್ತು. ಹೀಗೆ ಸತತವಾಗಿ ನಟಿಸಿ, ನಟಿಸಿ 'ಸಾವಿರದ ಸರದಾರ'ರಾದರು ಬ್ರಹ್ಮಾನಂದಂ.

ಆದರೆ, ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಬದಲಾದ ಪರಿಸ್ಥಿತಿಯಲ್ಲಿ, ಹೊಸ ಕಲಾವಿದರು ಬಂದು ಬ್ರಹ್ಮಾನಂದಂ ಅವರಿಗೆ ಸ್ವಲ್ಪ ಅವಕಾಶಗಳು ಕಡಿಮೆಯಾಗಿದ್ದವು. ಒಂದಿಷ್ಟು ಹೊಸಬರ ಚಿತ್ರಗಳಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿದ್ದವಾದರೂ, ಹಿಂದಿನ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ಸಾಕಷ್ಟು ಬದಲಾಗಿತ್ತು.

ಈಗ ಕರೊನಾ ಮತ್ತು ಲಾಕ್​ಡೌನ್​ನಿಂದ ಬ್ರಹ್ಮಾನಂದಂ ಅವರು ಇನ್ನಷ್ಟು ಅವಕಾಶಗಳು ವಂಚಿತರಾಗಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಕಳೆದ ನಾಲ್ಕು ತಿಂಗಳುಗಳಿಂದ ಯಾವೊಂದು ಚಿತ್ರದಲ್ಲೂ ಅವರು ನಟಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಅವರು ಹಿರಿತೆರೆ ಬಿಟ್ಟು, ಕಿರುತೆರೆಯ ಧಾರಾವಾಹಿಗಳಲ್ಲಿ ಹೆಚ್ಚು ನಟಿಸುತ್ತಾರೆಂಬ ಸುದ್ದಿಯೊಂದು ಹಬ್ಬಿದೆ. ಅಷ್ಟೇ ಅಲ್ಲ, ಈಗಾಗಲೇ ಒಂದು ತೆಲುಗು ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇವೆಲ್ಲಾ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಾವು ಯಾವ ಧಾರಾವಾಹಿಯಲ್ಲೂ ನಟಿಸುತ್ತಿಲ್ಲ ಎಂದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲೇ ಇರುವುದಾಗಿ ಹೇಳಿರುವ ಅವರು, ಒಂದಿಷ್ಟು ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದಾರಂತೆ. ಮುಂದೆ ಎಲ್ಲವೂ ಸರಿ ಹೋದ ಮೇಲೆ ನಟನೆ ಇದ್ದೇ ಇರುತ್ತದೆ ಎಂದಿರುವ ಅವರು, ಸದ್ಯಕ್ಕಂತೂ ಲಾಕ್​ಡೌನ್​ನಿಂದ ಸಿಕ್ಕಿರುವ ಸಮಯವನ್ನು ಜಾಲಿಯಾಗಿ ಕಳೆಯುತ್ತಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net