

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ( Salman Khan ) ಎಂದರೆ ಬೆಟ್ಟದಷ್ಟು ಧೈರ್ಯ, ಯಾರಿಗೆ ಬೇಕಾದರೂ ಎದುರು ನಿಲ್ಲುವ ಗತ್ತು. ಆದರೆ, ಅಂಥಹ ಧೈರ್ಯಶಾಲಿ ನಟನೊಬ್ಬ ಬಾಲ್ಯದಲ್ಲಿ ದೆವ್ವ ಅಥವಾ ವಿಚಿತ್ರ ಶಕ್ತಿಗಳ ಕಾಟಕ್ಕೆ ತತ್ತರಿಸಿ ಹೋಗಿದ್ದ ಎಂದರೆ ನೀವು ನಂಬಲೇಬೇಕು! ಹೌದು, ತಾವೇ ಖುದ್ದಾಗಿ ತಮ್ಮ ಬಾಲ್ಯದ ಮನೆಯಲ್ಲಿದ್ದ ವಿಚಿತ್ರ ಮತ್ತು ಭಯಾನಕ ಅನುಭವಗಳ ಬಗ್ಗೆ ಸಲ್ಮಾನ್ ಖಾನ್ ಬಾಯ್ಬಿಟ್ಟಿದ್ದು, ಈ ರೋಚಕ ಸಂಗತಿ ಈಗ ಎಲ್ಲೆಡೆ ವೈರಲ್ ಆಗಿದೆ.
ಬಾಲಿವುಡ್ನ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 9ರ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಲ್ಮಾನ್ ಖಾನ್, ತಮ್ಮ ಬಾಲ್ಯದ ದಿನಗಳ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕರಣ್ ಜೋಹರ್ ಮಾತನಾಡಿ, ಸಲ್ಮಾನ್ ಖಾನ್ ಇಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಸಹ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಬಹಳ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದರು ಎಂದು ನೆನಪಿಸಿಕೊಂಡರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಲ್ಮಾನ್, ಆ ಕೋಣೆಯಲ್ಲಿ ತಾನು ಒಂಟಿಯಾಗಿರುವುದನ್ನು ಎಂದಿಗೂ ಅನುಭವಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಆ ಸಣ್ಣ ಕೋಣೆಯಲ್ಲಿ ತಾನಿದ್ದಾಗ ಯಾರೋ ಅದೃಶ್ಯ ಶಕ್ತಿ ಅಥವಾ ಅಪರಿಚಿತ ಅತಿಥಿ ಜೊತೆಯಲ್ಲಿರುವ ಅನುಭವವಾಗುತ್ತಿತ್ತು ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ. ತಾನಾಗಿಯೇ ಲೈಟ್ಗಳು ಆನ್ ಮತ್ತು ಆಫ್ ಆಗುವುದು, ಕಬೋರ್ಡ್ಗಳು (ಅಲ್ಮೇರಾ) ತಾನಾಗಿಯೇ ತೆರೆದುಕೊಳ್ಳುವುದು ಮತ್ತು ಹಠಾತ್ತನೆ ಸಂಗೀತ ಕೇಳಿಸುವುದು ಮುಂತಾದ ವಿಚಿತ್ರ ಘಟನೆಗಳು ನಡೆಯುತ್ತಿದ್ದವು ಎಂದಿದ್ದಾರೆ. ಬಾತ್ರೂಮ್ ಹೊರಗಿನ ಕಬೋರ್ಡ್ ಬಳಿ ಯಾರೋ ಓಡಾಡುತ್ತಿರುವ ಶಬ್ದವನ್ನೂ ತಾವು ಕೇಳಿಸಿಕೊಂಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.
ಅದನ್ನು 'ಪ್ರೇತಾತ್ಮವಿರುವ ಕೋಣೆ' (Haunted Room) ಎಂದು ಕರೆಯಲು ನಿರಾಕರಿಸಿದ ಸಲ್ಮಾನ್ ಖಾನ್, ಅಲ್ಲಿ ಕೇವಲ ಒಂದು ಅದೃಶ್ಯ 'ಉಪಸ್ಥಿತಿ' (Presence) ಮಾತ್ರ ಇತ್ತು ಎಂದಿದ್ದಾರೆ. ಆ ಶಕ್ತಿಯು ತಮಗೆ ಎಂದಿಗೂ ಯಾವುದೇ ಹಾನಿ ಮಾಡಲಿಲ್ಲವಾದ್ದರಿಂದ ತಮಗೆ ಭಯವಾಗುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮಾಷೆಯಾಗಿ ಮಾತನಾಡಿ, ಹಾಡುಗಳನ್ನು ಕೇಳಿಸಿಕೊಳ್ಳುವಾಗ ತಮ್ಮ ಹಿಂದೆ ಯಾರೋ ನಿಂತಿರುವಂತೆ ಭಾಸವಾಗುತ್ತಿತ್ತು ಎಂದರು.
ಒಂದು ವೇಳೆ ಅಲ್ಲಿ ಸುಂದರ ಮಹಿಳೆ ಇದ್ದರೆ ತನ್ನ ಮುಂದೆ ಬರಲಿ ಎಂದು ತಮಾಷೆಯಾಗಿ ಕೇಳಿಕೊಳ್ಳುತ್ತಿದ್ದೆ ಎಂದು ಸಲ್ಮಾನ್ ನಗುತ್ತಾ ಹೇಳಿದ್ದು ಶೋನಲ್ಲಿ ನಗೆಯ ಅಲೆ ಎಬ್ಬಿಸಿತು.
ಒಟ್ಟಿನಲ್ಲಿ, ಸಲ್ಮಾನ್ ಖಾನ್ ಅವರ ಈ ವಿಚಿತ್ರ ಅನುಭವಗಳ ಕಥೆಯು ಬಾಲಿವುಡ್ ಅಂಗಳದಲ್ಲಿ ಮಾತ್ರವಲ್ಲದೆ ಅಭಿಮಾನಿಗಳ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ, ಸಲ್ಮಾನ್ ಖಾನ್ ಅವರ ಕುಟುಂಬವು 1970ರ ದಶಕದಿಂದಲೂ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲೇ ವಾಸಿಸುತ್ತಿದೆ ಎಂಬುದು ಗಮನಾರ್ಹ ಸಂಗತಿ, (ಏಜೆನ್ಸೀಸ್).