

ಮುಂಬೈ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಸೋದರ ಸೊಸೆ ಜೈನ್ ಮೇರಿ ಖಾನ್ ( Zayn Marie Khan ) ಅವರು ಮುಂಬೈ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಜೆಪಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ನಿಂದ ತಮ್ಮ ಮೈಮೇಲೆ ಮೂಡಿರುವ ಗಾಯದ ಗುರುತುಗಳನ್ನು ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ (ಅ. 10) ಮುಂಬೈನ ಐತಿಹಾಸಿಕ ಅಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯು ಹಿಂಸಾತ್ಮಕ ತಿರುವು ಪಡೆದುಕೊಂಡಿತು. ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿದ್ದ ಈ ಪ್ರತಿಭಟನೆಯಲ್ಲಿ ಆಮೀರ್ ಖಾನ್ ಅವರ ಸೋದರ ಸೊಸೆ ಜೈನ್ ಮೇರಿ, ಖ್ಯಾತ ನಟ ಇಮ್ರಾನ್ ಖಾನ್ ಹಾಗೂ ನಟಿ ಲೇಖಾ ವಾಷಿಂಗ್ಟನ್ ಉತ್ಸಾಹದಿಂದಲೇ ಭಾಗಿಯಾಗಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಯನ್ನು ಆಗ್ರಹಿಸಿ ನಡೆದ ಈ ಪ್ರತಿಭಟನೆಯ ವೇಳೆ ಪೊಲೀಸರು ಹಸ್ತಕ್ಷೇಪ ಮಾಡಿ, ಈ ಮೂವರು ಪ್ರಮುಖ ಸೆಲೆಬ್ರಿಟಿಗಳನ್ನು ಬಲವಂತವಾಗಿ ವಶಕ್ಕೆ ಪಡೆದರು.
ಪೊಲೀಸರ ವಶದಲ್ಲಿದ್ದ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾದರೂ ಜೈನ್ ಮೇರಿ ಅವರ ಮೈಮೇಲಿನ ಗಾಯದ ಗುರುತುಗಳು ಮತ್ತು ನೋವು ಮಾತ್ರ ಇನ್ನೂ ಮಾಸಿಲ್ಲ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಜೈನ್ ಮೇರಿ, ತಮ್ಮ ಕೈಗಳು, ಬೆರಳುಗಳು ಹಾಗೂ ಕಾಲುಗಳ ಮೇಲಾಗಿರುವ ಮಾರಣಾಂತಿಕ ಹಲ್ಲೆಯ ಗಾಯದ ಗುರುತುಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೈನ್, "ನಾವು ಯಾವುದಕ್ಕೂ ಬಗ್ಗಲ್ಲ, ಭಯವೇ ಉಳಿಯದ ಹಂತಕ್ಕೆ ನಮ್ಮನ್ನು ಹೆದರಿಸಬೇಡಿ ಎಂದಿದ್ದಾರೆ.
ಘಟನೆಯ ದಿನದಂದು ಜೈನ್ ಮೇರಿ ಅವರು ತಮ್ಮ ಬಂಧನದ ಘಟನೆಯನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಲೈವ್ ಆಗಿಯೇ ಹಂಚಿಕೊಂಡಿದ್ದರು. ಪೊಲೀಸರು ತಮ್ಮನ್ನು ಹಾಗೂ ಇತರರನ್ನು ಹೇಗೆ ಬಲವಂತವಾಗಿ ಪೊಲೀಸ್ ವಾಹನಕ್ಕೆ ಹತ್ತಿಸುತ್ತಿದ್ದಾರೆ ಎಂಬುದರ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡುವ ಮೂಲಕ ಜೈನ್ ಅವರು ಸಾರ್ವಜನಿಕರ ಗಮನ ಸೆಳೆದಿದ್ದರು.
ಅಂದಹಾಗೆ, ಈ ಸಂಪೂರ್ಣ ವಿವಾದಕ್ಕೆ ಮೂಲ ಕಾರಣವಾಗಿರುವುದು ಸಿಜೆಪಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ. ಇದೇ ಪ್ರತಿಭಟನೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿ ಮುಂಬೈನಲ್ಲಿ ನೂರಾರು ಕಾರ್ಯಕರ್ತರು ಹಾಗೂ ಸೆಲೆಬ್ರಿಟಿಗಳು ಅಗಸ್ಟ್ ಕ್ರಾಂತಿ ಮೈದಾನದಲ್ಲಿ ಜಮಾಯಿಸಿದ್ದರು. ಈ ಪ್ರತಿಭಟನೆಗೆ ತಾವು ಯಾವುದೇ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎಂಬುದು ಮುಂಬೈ ಪೊಲೀಸರ ಅಧಿಕೃತ ವಾದವಾಗಿದೆ. ಆದರೆ, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಸಿಜೆಪಿ ಕಾರ್ಯಕರ್ತರು, ತಾವು ಪ್ರತಿಭಟನೆಗೆ ಮುನ್ನವೇ ಇಮೇಲ್ ಮೂಲಕ ಮುಂಬೈ ಪೊಲೀಸರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೆವು ಆದರೆ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).