ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ಕೊನೇ ಕ್ಷಣದಲ್ಲಿ ರದ್ದು: ಪ್ರಭಾವಿ ರಾಜಕಾರಣಿಯೊಬ್ಬರ ಪೋನ್ ಕರೆಗೆ ಮಣಿದ್ರಾ ಪೊಲೀಸರು? Prajwal Revanna

ಕಳೆದ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಬಲವಾದ ಪೊಲೀಸ್ ಭದ್ರತೆಯಲ್ಲಿ ಹಿಂಡಲಗಾ ಜೈಲಿಗೆ ಕರೆದೊಯ್ಯಲು ವಾಹನ ಹೊರಟಿತ್ತು. ತುಮಕೂರಿನ ಶಿರಾದವರೆಗೆ ಸಿ.ಎ.ಆರ್ (CAR) ಪೊಲೀಸರು ಅತ್ಯಂತ ಗೋಪ್ಯವಾಗಿ ಆತನನ್ನು ಕರೆದೊಯ್ದಿದ್ದರು.
Prajwal Revanna
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ
Published on: 

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಿ ಪ್ರಜ್ವಲ್ ರೇವಣ್ಣರ ( Prajwal Revanna ) ಜೈಲು ಬದಲಾವಣೆ ಪ್ರಕ್ರಿಯೆಯು ಕೊನೇ ಕ್ಷಣದಲ್ಲಿ ದಿಢೀರ್​ ರದ್ದಾಗಿರುವುದು ರಾಜ್ಯ ರಾಜಕಾರಣದಲ್ಲಿ ಇದೀಗ ಭಾರಿ ಕುತೂಹಲ ಹಾಗೂ ವಿವಾದಕ್ಕೆ ಕಾರಣವಾಗಿದೆ.

ಜೈಲು ನಿಯಮ ಉಲ್ಲಂಘಿಸಿದ ಕಾರಣ ಸ್ಥಳಾಂತರ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಜ್ವಲ್​ ರೇವಣ್ಣರನ್ನು ಸ್ಥಳಾಂತರಿಸಲು ಸಾಕಷ್ಟು ಸಿದ್ಧತೆಗಳು ನಡೆದಿದ್ದವು. ಆದರೆ, ಹಠಾತ್ ಸಂಭವಿಸಿದ ನಾಟಕೀಯ ಬೆಳವಣಿಗೆಯಿಂದಾಗಿ ಸ್ಥಳಾಂತರವೇ ರದ್ದಾಗಿದೆ. ಇದರ ಹಿಂದೆ ಉನ್ನತ ಮಟ್ಟದ ರಾಜಕೀಯ ಲಾಬಿಯೇ ಕೆಲಸ ಮಾಡಿದೆ ಎಂಬ ಸ್ಫೋಟಕ ಸಂಗತಿಗಳು ಪೊಲೀಸ್ ವಲಯದಿಂದ ಹೊರಬಿದ್ದಿವೆ.

Also Read
ಮಹಿಳೆ ದೂರು: ಬೆಂಗಳೂರಲ್ಲಿ ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅರೆಸ್ಟ್...! Nanjeshwara Shivacharya Swamiji
Prajwal Revanna

ಕಳೆದ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಬಲವಾದ ಪೊಲೀಸ್ ಭದ್ರತೆಯಲ್ಲಿ ಹಿಂಡಲಗಾ ಜೈಲಿಗೆ ಕರೆದೊಯ್ಯಲು ವಾಹನ ಹೊರಟಿತ್ತು. ತುಮಕೂರಿನ ಶಿರಾದವರೆಗೆ ಸಿ.ಎ.ಆರ್ (CAR) ಪೊಲೀಸರು ಅತ್ಯಂತ ಗೋಪ್ಯವಾಗಿ ಆತನನ್ನು ಕರೆದೊಯ್ದಿದ್ದರು. ಆದರೆ, ಜೈಲು ಬದಲಾವಣೆಯ ಮಧ್ಯೆ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್‌ಗೆ ಬಂದ ಆ ತುರ್ತು ಕರೆ ಕಾರ್ಯಾಚರಣೆಯ ಇಡೀ ದಿಕ್ಕನ್ನೇ ಕ್ಷಣಮಾತ್ರದಲ್ಲಿ ಬದಲಾಯಿಸಿತು.

ಪೊಲೀಸ್ ಮೂಲಗಳ ಪ್ರಕಾರ, ಪ್ರಜ್ವಲ್ ರೇವಣ್ಣನನ್ನು ಉತ್ತರ ಕರ್ನಾಟಕದ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದರೆ ವಿಪಕ್ಷಗಳ ಕೈಗೆ ಪ್ರಬಲ ರಾಜಕೀಯ ಅಸ್ತ್ರ ಸಿಕ್ಕಂತಾಗುತ್ತದೆ ಮತ್ತು ಇದು ಆಡಳಿತಾರೂಢ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಲಿದೆ ಎಂಬ ಆತಂಕ ಪ್ರಭಾವಿ ನಾಯಕರನ್ನು ಕಾಡಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ, ಮಾರ್ಗಮಧ್ಯದಲ್ಲೇ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಕೂಡಲೇ ಪ್ರಜ್ವಲ್‌ನನ್ನು ವಾಪಸ್ ಬೆಂಗಳೂರಿಗೆ ಕರೆಸಿಕೊಳ್ಳುವಂತೆ ಹಿರಿಯ ಅಧಿಕಾರಿಗೆ ಮೌಖಿಕವಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

Also Read
ಜ್ಞಾನೇಶ್ ಕುಮಾರ್ ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡ್ತಿದೆ: ನಮ್ಮ ಪ್ರತಿಭಟನೆಯಿಂದ ಸಿಇಸಿಗೆ ನಿದ್ದೆ ಬರ್ತಿಲ್ಲ ಎಂದ ರಾಹುಲ್​ ಗಾಂಧಿ! | Rahul Gandhi
Prajwal Revanna

ಪ್ರಮುಖ ಮತ್ತು ಗಂಭೀರ ಸ್ವರೂಪದ ಆರೋಪಿಯೊಬ್ಬರ ಜೈಲು ಸ್ಥಳಾಂತರದಲ್ಲೇ ಇಂತಹ ರಾಜಕೀಯ ಹಸ್ತಕ್ಷೇಪ ನಡೆದಿರುವುದು ಕಾನೂನು ಮತ್ತು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಪರಾಧಿಗಳ ವಿಚಾರದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ಬಿಂಬಿಸುವ ಸರ್ಕಾರಗಳು, ತೆರೆಮರೆಯಲ್ಲಿ ಪ್ರಭಾವಿಗಳ ರಕ್ಷಣೆಗೆ ನಿಲ್ಲುತ್ತಿವೆ ಎಂಬುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ. ಅರ್ಧದಾರಿಯಲ್ಲೇ ವಾಪಸಾದ ಪ್ರಜ್ವಲ್ ರೇವಣ್ಣ ಪ್ರಕರಣವು ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸುತ್ತಿನ ಮಾತಿನ ಸಮರಕ್ಕೆ ಮುನ್ನುಡಿ ಬರೆದಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಸ್ಫೋಟಕ ಮಾಹಿತಿಗಳು ಹೊರಬೀಳಲಿವೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net