

ಮುಂಬೈ: ನಿತೀಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ( Sai Pallavi ) ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಪ್ರೀಮಿಯರ್ ಶೋ ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಇದರ ಬೆನ್ನಲ್ಲೇ ನಟಿ ಸಾಯಿ ಪಲ್ಲವಿ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ನಾಂದಿ ಆಡಿದೆ. ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು? ವಿರೋಧ ಏಕೆ? ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಲಾಸ್ ಏಂಜಲೀಸ್‌ನ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಸಿನಿಮಾವು ಜಾಗತಿಕ ಪ್ರೇಕ್ಷಕರಿಗೆ ಭಾರತೀಯ ಸಂಸ್ಕೃತಿ ಮತ್ತು ಪೌರಾಣಿಕ ಕಾವ್ಯಗಳನ್ನು ಪರಿಚಯಿಸಲು ಅತ್ಯುತ್ತಮ ವೇದಿಕೆಯಾಗಲಿದೆ ಎಂದರು. ಆದರೆ, ಮಾತು ಮುಂದುವರಿಸುತ್ತಾ ಅವರು ರಾವಣನ ಕುರಿತು ನೀಡಿದ ವ್ಯಾಖ್ಯಾನ ನೆಟ್ಟಿಗರ ಗಮನ ಸೆಳೆಯಿತು. ರಾಮಾಯಣವು ನಮಗೆ ಆತ್ಮಾವಲೋಕನ ಮಾಡಿಕೊಳ್ಳಲು ಕಲಿಸುತ್ತದೆ. ಪ್ರತಿಯೊಬ್ಬರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಏಕೆಂದರೆ ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ. ನಮ್ಮಲ್ಲಿರುವ ರಾವಣನನ್ನು ನಾವು ಗುರುತಿಸಿ, ಸಮಯ ಕಳೆದಂತೆ ನಮ್ಮನ್ನು ನಾವು ತಿದ್ದುಕೊಳ್ಳುವುದು ಮುಖ್ಯ ಎಂದು ಸಾಯಿ ಪಲ್ಲವಿ ಹೇಳಿದರು.
ಸಾಯಿ ಪಲ್ಲವಿ ಅವರ ಈ ಹೇಳಿಕೆಯ ವಿಡಿಯೋ ತುಣುಕು ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು ನಟಿಯ ಪದ ಬಳಕೆ ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅವರ ಹೇಳಿಕೆಯ ಹಿನ್ನೆಲೆಯನ್ನು ಬೆಂಬಲಿಸಿದ್ದಾರೆ. ಇಂತಹ ಹೇಳಿಕೆಗಳು ಅನಗತ್ಯ ವಿವಾದಕ್ಕೆ ದಾರಿ ಮಾಡಿಕೊಡುತ್ತವೆ, ಸೀತೆ ಪಾತ್ರಧಾರಿ ಇಂತಹ ಪದ ಬಳಕೆಯಿಂದ ದೂರವಿರಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು "ಅಪಹರಿಸಿದವನನ್ನೇ ಹೊಗಳುವ ಸ್ಥಿತಿ" ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಅದೇ ಸಮಯದಲ್ಲಿ, ನಟಿಯ ಬೆಂಬಲಕ್ಕೆ ನಿಂತಿರುವ ಅನೇಕ ಅಭಿಮಾನಿಗಳು ಮತ್ತು ನೆಟ್ಟಿಗರು ಅವರ ಮಾತುಗಳನ್ನು ಪಾಸಿಟಿವ್ ಆಗಿ ವಿಶ್ಲೇಷಿಸಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣಗಳೆರಡೂ ಇರುತ್ತವೆ ಎಂಬುದನ್ನು ಹೇಳುವುದು ವಿವಾದಾಸ್ಪದ ವಿಷಯವಲ್ಲ ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಜನರು ಪ್ರತಿಯೊಂದನ್ನೂ ವಿವಾದ ಮಾಡಲು ಬಯಸುತ್ತಾರೆ. ಅವರು ರಾವಣನನ್ನು ಪ್ರತಿಯೊಬ್ಬರ ಒಳಗಿರುವ ಕೆಟ್ಟ ಗುಣಗಳಿಗೆ ಹೋಲಿಸಿ ಮಾತನಾಡಿದ್ದಾರೆ ಮತ್ತು ಅದನ್ನು ಜಯಿಸಬೇಕು ಎಂದು ಹೇಳಿದ್ದಾರೆ ಅಷ್ಟೇ ಎಂದು ಮತ್ತೊಬ್ಬರು ಸಾಯಿ ಪಲ್ಲವಿ ಅವರ ಪರವಾಗಿ ವಾದಿಸಿದ್ದಾರೆ.
ಈ ವಿವಾದ ಏನೇ ಇದ್ದರೂ, ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿರುವ 'ರಾಮಾಯಣ' ಚಿತ್ರವನ್ನು ನಿರ್ಮಾಪಕರು ಎರಡು ಭಾಗಗಳಲ್ಲಿ ನಿರ್ಮಿಸುತ್ತಿದ್ದಾರೆ. ಮೊದಲ ಭಾಗವು 2026ರ ನವೆಂಬರ್ 5 ರಂದು ಜಾಗತಿಕವಾಗಿ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದರೆ, ಎರಡನೇ ಭಾಗವನ್ನು 2027ರ ದೀಪಾವಳಿಯ ಹಬ್ಬದ ಶುಭ ಸಂದರ್ಭದಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ, (ಏಜೆನ್ಸೀಸ್).