ಹೊರಬಿತ್ತು ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ವಿಮರ್ಶೆ! ನೋಡಿದವರು ಏನಂದ್ರು? Ramayana

Ramayana
ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ನಟ ಯಶ್​
Published on: 

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ 'ರಾಮಾಯಣ' ( Ramayana ) ಸಿನಿಮಾದ ಮೊದಲ ಪ್ರದರ್ಶನವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ಚಿತ್ರ ವೀಕ್ಷಿಸಿದ ಅಂತಾರಾಷ್ಟ್ರೀಯ ಹಾಗೂ ಅನಿವಾಸಿ ಭಾರತೀಯ ವಿಮರ್ಶಕರಿಂದ ಮೊದಲ ವಿಮರ್ಶೆಗಳು ಹೊರಬಿದ್ದಿವೆ.

ಹೌದು, ನವೆಂಬರ್ 5 ರಂದು ಜಾಗತಿಕವಾಗಿ ಅದ್ದೂರಿಯಾಗಿ ತೆರೆಕಾಣಲಿರುವ ಈ ದೃಶ್ಯಕಾವ್ಯವನ್ನು ಅ. 27 ರಂದೇ ಲಾಸ್​ ಏಂಜಲೀಸ್​ನಲ್ಲಿ ಪ್ರದರ್ಶಿಸಲಾಗಿದೆ. ಸಿನಿಮಾ ನೋಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಕ್ಕೆ ಭಾರಿ ಪ್ರಶಂಸೆಗಳು ಹರಿದುಬರುತ್ತಿದ್ದು, ಇದೊಂದು ಅದ್ಭುತ ದೃಶ್ಯ ವೈಭವವೆಂದು ಹಲವರು ಬಣ್ಣಿಸಿದ್ದಾರೆ.

Also Read
Ramayana LA Premiere​ ಶೋಗೆ ರಾಧಿಕಾ ಜೊತೆ ಯಶ್​ ಎಂಟ್ರಿ; ಕಪ್ಪು ಸೂಟ್​ಗೆ ರಾವಣನ 'ದಶಮುಖ' ಚಿನ್ನದ ಬ್ರೂಚ್​​ ಧರಿಸಿ ಕಂಡಿದ್ದು ಹೀಗೆ
Ramayana

ಚಿತ್ರ ಪ್ರದರ್ಶನದ ಬಳಿಕ ನೆಟ್ಟಿಗರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದು, "'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ನಿಜಕ್ಕೂ ಅದ್ಭುತವಾಗಿದೆ! ವಿಎಫ್‌ಎಕ್ಸ್‌ ದೃಶ್ಯಗಳು, ನೃತ್ಯ, ಸಂಗೀತ ಹಾಗೂ ಸಾಹಸ ದೃಶ್ಯಗಳು ಭವ್ಯವಾಗಿ ಮೂಡಿಬಂದಿವೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯ ಅದ್ಭುತವಾಗಿದ್ದರೆ, ರಾವಣನಾಗಿ ಕನ್ನಡಿಗ ನಟ ಯಶ್ ಪಾತ್ರಕ್ಕೆ ಗಂಭೀರತೆ ತಂದಿದ್ದಾರೆ. ಇದು ಈ ವರ್ಷದ ಅತ್ಯುತ್ತಮ ದೃಶ್ಯ ವೈಭವ" ಎಂದು ಕೊಂಡಾಡಿದ್ದಾರೆ. ಪ್ರದರ್ಶನದ ವೇಳೆ ಪಾಶ್ಚಿಮಾತ್ಯ ಪ್ರೇಕ್ಷಕರು ಕೂಡ ಭಾವುಕರಾಗಿದ್ದು, ರಣಬೀರ್ ಅವರ ನಟನೆಗೆ ಕಣ್ಣೀರು ಹಾಕಿದ್ದಾರೆ ಎಂದು ಹಲವು ವಿಮರ್ಶೆಗಳು ತಿಳಿಸಿವೆ.

ಆದಾಗ್ಯೂ, ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರಕ್ಕೆ ಕೆಲವು ನೆಗೆಟಿವ್​ ಹಾಗೂ ಸಾಧಾರಣ ವಿಮರ್ಶೆಗಳು ಕೂಡ ಲಭ್ಯವಾಗಿವೆ. ಚಿತ್ರದಲ್ಲಿ ದೈವಿಕತೆಯ ಭಾವನೆ ಕೊಂಚ ಕೊರತೆಯಾಗಿದೆ, ಹಿನ್ನೆಲೆ ಸಂಗೀತ ಅಷ್ಟಾಗಿ ಸೆಳೆಯುವುದಿಲ್ಲ ಹಾಗೂ ಎರಡನೇ ಭಾಗದಲ್ಲಿ ಕಥೆಯ ವೇಗ ಕುಸಿದಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸುರರ ಪಾತ್ರಗಳು ಕಾರ್ಟೂನ್ ಮಾದರಿಯಲ್ಲಿ ಕಾಣಿಸುತ್ತವೆ. ಕೋಟಿ ಕೋಟಿ ಹಣ ವೆಚ್ಚ ಮಾಡಿದ್ದರೂ ಕೆಲವು ಕಡೆ ಸ್ಟುಡಿಯೋ ಮತ್ತು ಗ್ರೀನ್ ಸ್ಕ್ರೀನ್ ಎಫೆಕ್ಟ್ ಎದ್ದು ಕಾಣುತ್ತದೆ. ಹಾಲಿವುಡ್​ ಮತ್ತು ಭಾರತೀಯ ಶೈಲಿಯನ್ನು ಸಮ್ಮಿಶ್ರಣ ಮಾಡಲು ಹೋಗಿ ಸಂಗೀತ ತನ್ನ ಆತ್ಮವನ್ನೇ ಕಳೆದುಕೊಂಡಿದೆ ಎಂದು ಕೆಲ ವಿಮರ್ಶಕರು ಬಹಿರಂಗಪಡಿಸಿದ್ದಾರೆ.

ಅಂದಹಾಗೆ, ಈ ದೃಶ್ಯಕಾವ್ಯವನ್ನು ಪ್ರಸಿದ್ಧ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೀಶ್ ತಿವಾರಿ ಸೇರಿ ಬೃಹತ್ ಪ್ರಮಾಣದಲ್ಲಿ ನಿರ್ಮಿಸಿದ್ದಾರೆ. ಯಶ್​ ಕೂಡ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಈ ಚಿತ್ರದ ಎರಡು ಭಾಗಗಳ ಒಟ್ಟು ಬಜೆಟ್ ಸುಮಾರು 500 ಮಿಲಿಯನ್ ಡಾಲರ್, ಅಂದರೆ 4,000 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಬಹಿರಂಗಪಡಿಸಿದರು.

Also Read
‘ರಾಮಾಯಣ’ ಸಿನಿಮಾದಲ್ಲಿ ಎಐ ಬಳಸಿದ್ದಾರಾ..! ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದೇನು? | Ramayana Movie
Ramayana

ಇನ್ನೂ ಲಾಸ್ ಏಂಜಲೀಸ್‌ನಲ್ಲಿ ನಡೆದ ಈ ವಿಶೇಷ ಪ್ರದರ್ಶನದಲ್ಲಿ ನಿರ್ದೇಶಕ ನಿತೀಶ್ ತಿವಾರಿ, ಪತ್ನಿ ಅಶ್ವಿಪಿ ಅಯ್ಯರ್, ನಟ ರಣಬೀರ್ ಕಪೂರ್, ಯಶ್ ಹಾಗೂ ಸೀತೆಯ ಪಾತ್ರಧಾರಿ ಸಾಯಿ ಪಲ್ಲವಿ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ ಗಮನ ಸೆಳೆದರು.

ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ಮಹಾಕಾವ್ಯದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅಂದರೆ ನವೆಂಬರ್​ 5ರಂದು ಜಾಗತಿಕವಾಗಿ ತೆರೆಕಾಣಲಿದ್ದರೆ, ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net