‘ರಾಮಾಯಣ’ ಸಿನಿಮಾದಲ್ಲಿ ಎಐ ಬಳಸಿದ್ದಾರಾ..! ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದೇನು? | Ramayana Movie

Use of AI in the Ramayana movie?
ರಾಮಾಯಣ ಸಿನಿಮಾದಲ್ಲಿ ಎಐ ಬಳಕೆ?
Published on: 

Ramayana: ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ ಪಾರ್ಟ್ 1’ನಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ ಅನ್ನುವ ವದಂತಿಗಳಿಗೆ ನಿರ್ದೇಶಕ ನಿತೇಶ್ ತಿವಾರಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಿನಿಮಾದ ಪ್ರದರ್ಶನದಲ್ಲಿ ಮಾತನಾಡುವಾಗ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಲಾಸ್‌ ಏಂಜಲೀಸ್‌ನ ‘ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್’ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ‘ರಾಮಾಯಣ’ ಸಿನಿಮಾದ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿತೇಶ್ ತಿವಾರಿ, ಎಐ ಬಳಕೆಯ ಬಗ್ಗೆ ಎದ್ದಿದ್ದ ಅನುಮಾನಗಳನ್ನು ದೂರಗೊಳಿಸಿದರು.

ಎಐ ಬಳಸಿರೋದು ಲಿಪ್ ಸಿಂಕ್​ಗೆ ಮಾತ್ರ

‘ನಾವು ಎಐ ತಂತ್ರಜ್ಞಾನವನ್ನು ಕೇವಲ ಲಿಪ್ ಸಿಂಕ್ ಹೊಂದಾಣಿಕೆ ಮಾಡಲು ಮಾತ್ರ ಬಳಸಿದ್ದೇವೆ. ಪ್ರತಿಯೊಂದು ಭಾಷೆಯ ಧ್ವನಿಯನ್ನು ನಿಜವಾದ ಕಲಾವಿದರೇ ಡಬ್ಬಿಂಗ್ ಮಾಡಿದ್ದಾರೆ’ ಎಂದು ನಿತೇಶ್ ತಿವಾರಿ ಸ್ಪಷ್ಟಪಡಿಸಿದರು. ನಿರ್ಮಾಪಕ ನಮಿತ್ ಮಲ್ಹೋತ್ರಾ ‘ಬ್ರಹ್ಮ ಎಐ’ ತಂತ್ರಜ್ಞಾನದ ಬಗ್ಗೆ ಹೇಳಿದ ನಂತರ ನಟರ ಅಭಿನಯಕ್ಕೂ ಎಐ ಬಳಸಲಾಗಿದೆ ಎಂಬ ವದಂತಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಈ ಸ್ಪಷ್ಟನೆ ನೀಡಿದ್ದಾರೆ.

Ramayana Craze in America Too
ಅಮೆರಿಕದಲ್ಲೂ ರಾಮಾಯಣದ ಕ್ರೇಜ್

ಲಾಸ್‌ ಏಂಜಲೀಸ್‌ನಲ್ಲಿ ಗ್ರ್ಯಾಂಡ್ ಪ್ರಿಮಿಯರ್

ಅಮೆರಿಕದ ಪ್ರತಿಷ್ಠಿತ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ನಡೆದ 3D ಪ್ರದರ್ಶನದಲ್ಲಿ ಚಿತ್ರದ ನಾಯಕರಾದ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಭಾಗವಹಿಸಿದ್ದರು. ಹಾಲಿವುಡ್‌ ಕಲಾವಿದರು, ತಂತ್ರಜ್ಞರು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಕೆಲ ಹಾಲಿವುಡ್ ಗಣ್ಯರು ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.

ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, "ಅಮೆರಿಕ ದೊಡ್ಡ ಸಿನಿಮಾಗಳನ್ನು ಮಾಡುತ್ತದೆ. ಆದರೆ ಅಮೆರಿಕ ಹೊರತುಪಡಿಸಿ ಬೇರೆ ದೇಶದಿಂದ ಬರುತ್ತಿರುವ ಅತಿದೊಡ್ಡ ಸಿನಿಮಾಗಳಲ್ಲಿ ‘ರಾಮಾಯಣ’ ಒಂದಾಗಲಿದೆ. ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಉತ್ತಮ ವೇದಿಕೆ," ಎಂದರು.

ಇದನ್ನೂ ಓದಿ:POCSO Act: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಎರಡು ಭಾಗಗಳಲ್ಲಿ ಬರಲಿದೆ ಸಿನಿಮಾ

ಮಹಾಕಾವ್ಯ ಆಧಾರಿತ ಈ ಸಿನಿಮಾ 2 ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗ ಈ ದೀಪಾವಳಿಗೆ ಹಾಗೂ 2ನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ತೆರೆಕಾಣಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮತ್ತು ಐಮ್ಯಾಕ್ಸ್ ಆವೃತ್ತಿಯಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಾಜಲ್ ಅಗರ್ವಾಲ್ ಹಾಗೂ ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net