ಬಾಲಿವುಡ್​ vs ಸೌತ್​ ಸಿನಿರಂಗ... ಎರಡರಲ್ಲಿ ಯಾವುದು ಬೆಸ್ಟ್​? ಸಮೀರಾ ರೆಡ್ಡಿ ಕೊಟ್ಟ ಉತ್ತರ ವೈರಲ್​! Sameera Reddy

ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಕಮ್‌ಬ್ಯಾಕ್ ಮತ್ತು ಸಿನಿಮಾ ಅನುಭವಗಳ ಬಗ್ಗೆ ಮಾತನಾಡಿದ ಸಮೀರಾ, ಸಂಜಯ್ ದತ್ ಅವರು ತಮಗಾಗಿ ಶೂಟಿಂಗ್ ವೇಳಾಪಟ್ಟಿಯನ್ನು ಹೇಗೆ ಹೊಂದಾಣಿಕೆ ಮಾಡಿಕೊಟ್ಟರು ಎಂಬುದನ್ನು ವಿವರಿಸಿದ್ದಾರೆ.
Sameera Reddy
ಬಹುಭಾಷಾ ನಟಿ ಸಮೀರಾ ರೆಡ್ಡಿ
Published on: 

ಮುಂಬೈ: ಬಾಲಿವುಡ್ ಮತ್ತು ದಕ್ಷಿಣ ಭಾರತ ಸಿನಿರಂಗಗಳೆರಡರಲ್ಲೂ ಮಿಂಚಿದ್ದ ಬಹುಭಾಷಾ ನಟಿ ಸಮೀರಾ ರೆಡ್ಡಿ ( Sameera Reddy ), ತಮಗೆ ಬಾಲಿವುಡ್‌ಗಿಂತ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚಿನ ಗೌರವ, ಪ್ರೀತಿ ಮತ್ತು ಸ್ಟಾರ್‌ಡಮ್ ಸಿಕ್ಕಿದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಮಕ್ಕಳ ಲಾಲನೆ-ಪಾಲನೆಗಾಗಿ ಸಿನಿಮಾದಿಂದ ದೂರವಿದ್ದು, ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಮಾಡಿರುವ ಅವರು ತಮ್ಮ ಸಿನಿಪಯಣದ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮಕ್ಕಳ ಪಾಲನೆಗಾಗಿ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ಬಿಡುವು ಪಡೆದಿದ್ದ ನಟಿ ಸಮೀರಾ ರೆಡ್ಡಿ, ಸಂಜಯ್ ದತ್ ಅಭಿನಯದ 'ಆಖ್ರಿ ಸವಾಲ್' ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಕಮ್‌ಬ್ಯಾಕ್ ಮತ್ತು ಸಿನಿಮಾ ಅನುಭವಗಳ ಬಗ್ಗೆ ಮಾತನಾಡಿದ ಸಮೀರಾ, ಸಂಜಯ್ ದತ್ ಅವರು ತಮಗಾಗಿ ಶೂಟಿಂಗ್ ವೇಳಾಪಟ್ಟಿಯನ್ನು ಹೇಗೆ ಹೊಂದಾಣಿಕೆ ಮಾಡಿಕೊಟ್ಟರು ಎಂಬುದನ್ನು ವಿವರಿಸಿದ್ದಾರೆ. ವಾರದ ಉಳಿದ ದಿನಗಳಲ್ಲಿ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಅನುಕೂಲವಾಗುವಂತೆ ವಾರಾಂತ್ಯದಲ್ಲಿ (ವೀಕೆಂಡ್) ಮಾತ್ರ ಚಿತ್ರೀಕರಣ ನಡೆಸಲು ಸಂಜಯ್ ದತ್ ಅವಕಾಶ ನೀಡಿದ್ದರು ಎಂದು ಸಮೀರಾ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

Also Read
ಸೀರೆ ಕೇವಲ ಸಾಂಪ್ರದಾಯಿಕ ಉಡುಗೆಯಲ್ಲ ಅದು ಹೆಣ್ಣಿಗೆ... ನಟಿ ಶಾಮ್ನಾ ಕಾಸಿಂರಿಂದ ಬೋಲ್ಡ್​ ಮಾತು..! Shamna Kasim
Sameera Reddy

ಚಿತ್ರರಂಗದಲ್ಲಿ ತಾಯಂದಿರಾದ ನಟಿಯರ ಕೆಲಸದ ಅವಧಿಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಪ್ರತಿಕ್ರಿಯಿಸಿದ ಸಮೀರಾ, ತಮಗೆ ಹೆಚ್ಚುವರಿ ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಯಾವುದೇ ತೊಂದರೆಯಿರಲಿಲ್ಲ ಎಂದು ಹೇಳಿದ್ದಾರೆ. "ನಾನು ಸಂಜಯ್ ಅವರ ಸಿನಿಮಾಗೆ ಶೂಟಿಂಗ್ ಮಾಡುವಾಗ ನಿರಂತರವಾಗಿ ಕೆಲಸ ಮಾಡಿದ್ದೇನೆ, ನಾನು ಮುಂಬೈನಲ್ಲಿ ವಾಸಿಸದ ಕಾರಣ ನನ್ನ ನಿರ್ಮಾಪಕರಿಗೆ ಉತ್ತಮ ಕೆಲಸ ನೀಡಬೇಕೆಂಬ ಉದ್ದೇಶದಿಂದ ದೀರ್ಘಾವಧಿಯ ಕೆಲಸ ಅಥವಾ ಹೆಚ್ಚುವರಿ ಶಿಫ್ಟ್‌ಗಳಿಗೂ ಬೇಸರ ಮಾಡಿಕೊಳ್ಳದೆ ಕೆಲಸ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ. ಅಗತ್ಯವಿದ್ದಾಗಲೆಲ್ಲಾ ಹೆಚ್ಚುವರಿ ಸಮಯ ಕೆಲಸ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ನವ ತಾಯಂದಿರಿಗೆ 8 ಗಂಟೆಗಳ ಕೆಲಸದ ಅವಧಿಯ ಕುರಿತು ಮಾತನಾಡಿದ ಸಮೀರಾ, ಈ ವಿಚಾರದಲ್ಲಿ ಎರಡೂ ಕಡೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. "ಹೊಸದಾಗಿ ತಾಯಿಯಾದವರಿಗೆ ಸಾಕಷ್ಟು ಒತ್ತಡವಿರುತ್ತದೆ, ಮಗುವಿಗೆ ಹಾಲುಣಿಸಬೇಕು ಮತ್ತು ಹಾರ್ಮೋನ್ ಬದಲಾವಣೆಗಳ ನಡುವೆ ಕೆಲಸ ಮಾಡುವುದು ಸುಲಭವಲ್ಲ. ನಿರ್ಮಾಪಕರು ನಟಿಗೆ ಹೊಂದಿಕೊಳ್ಳಲು ಸಾಧ್ಯವಾದರೆ ಅದು ಉತ್ತಮ, ಆದರೆ ನಿರ್ಮಾಪಕರ ದೃಷ್ಟಿಕೋನದಿಂದ ನೋಡಿದಾಗ ಸೆಟ್‌ನಲ್ಲಿ ಪ್ರತಿದಿನ ದೊಡ್ಡ ಮಟ್ಟದ ಖರ್ಚು ಇರುತ್ತದೆ ಮತ್ತು ಕೆಲಸ ವಿಳಂಬವಾದರೆ ಭಾರಿ ನಷ್ಟ ಉಂಟಾಗುತ್ತದೆ ಎಂದಿದ್ದಾರೆ.

ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾರಂಗದ ಅನುಭವಗಳನ್ನು ಹೋಲಿಸಿದ ಸಮೀರಾ ರೆಡ್ಡಿ, ದಕ್ಷಿಣ ಭಾರತದ ಸಿನಿಮಾ ಪಯಣ ತಮಗೆ ಅತ್ಯದ್ಭುತ ಅನುಭವ ನೀಡಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. "ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಮತ್ತು ಮೋಹನ್‌ಲಾಲ್ ಅವರಂತಹ ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಪ್ರತಿಯೊಬ್ಬರ ಪಯಣವೂ ವಿಭಿನ್ನವಾಗಿರುತ್ತದೆ, ಆದರೆ ನನಗೆ ಬಾಲಿವುಡ್‌ಗಿಂತ ದಕ್ಷಿಣ ಭಾರತದ ಸಿನಿಮಾಗಳ ಅನುಭವವೇ ಅತ್ಯುತ್ತಮವಾಗಿತ್ತು. ಹಿಂದಿ ಚಿತ್ರರಂಗದಲ್ಲಿ ಅನುಭವಿಸಿದ್ದಕ್ಕಿಂತ ಹೆಚ್ಚಿನ ಗೌರವ, ಕಲಾತ್ಮಕ ಮೌಲ್ಯ, ಹಣ ಮತ್ತು ಸ್ಟಾರ್‌ಡಮ್ ನನಗೆ ಸೌತ್ ಸಿನಿಮಾಗಳಲ್ಲಿ ಸಿಕ್ಕಿದೆ" ಎಂದು ಅವರು ಮುಕ್ತವಾಗಿ ಹೇಳಿದ್ದಾರೆ.

Also Read
ಈಗ ಎಲ್ಲಿದ್ದಾಳೆ ಕುಂಭಮೇಳದ ವೈರಲ್ ಸುಂದರಿ? ಮದುವೆ, ಲವ್ ಜಿಹಾದ್ ವಿವಾದದ ನಂತ್ರ ಹೇಗಿದೆ ಈಕೆಯ ಬದುಕು? Kumbh Mela Viral Girl
Sameera Reddy

18 ವರ್ಷಗಳ ನಂತರವೂ ದಕ್ಷಿಣ ಭಾರತದ ಅಭಿಮಾನಿಗಳಿಂದ ತಮಗೆ ಸಿಗುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ಸಾಟಿಯೇ ಇಲ್ಲ ಎಂದು ಸಮೀರಾ ಭಾವುಕರಾಗಿದ್ದಾರೆ. "ಬಾಲಿವುಡ್ ಅಭಿಮಾನಿಗಳು ಬಹುಶಃ 'ಹೌದು, ಸಮೀರಾ ರೆಡ್ಡಿ ಎಂಬ ನಟಿ ಇದ್ದರು' ಎಂದಷ್ಟೇ ಹೇಳಬಹುದು, ಆದರೆ ದಕ್ಷಿಣ ಭಾರತದ ಅಭಿಮಾನಿಗಳು ಇಂದಿಗೂ ನನ್ನನ್ನು ಅಪಾರ ಪ್ರೀತಿಯಿಂದ ಸ್ವಾಗತಿಸುತ್ತಾರೆ. 'ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ, ನೀವು ನಮ್ಮ ವಾರಣಂ ಆಯಿರಂ ಸಿನಿಮಾದ ಮೇಘನಾ' ಎಂದು ಗುರುತಿಸುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳಿಗೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ ಮತ್ತು ನಾನು ಮೊದಲನೆಯದಾಗಿ ನನ್ನನ್ನು ದಕ್ಷಿಣ ಭಾರತೀಯ ನಟಿ ಎಂದೇ ಪರಿಗಣಿಸುತ್ತೇನೆ ಎಂದು ಸಮೀರಾ ರೆಡ್ಡಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಸಮೀರಾ ಅವರು ಕನ್ನಡದಲ್ಲಿ ನಟ ಸುದೀಪ್​ ಜತೆ ವರದನಾಯಕ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ, (ಏಜೆನ್ಸೀಸ್​).