

ಮುಂಬೈ: ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಸಿನಿಮಾ 'ರಾಮಾಯಣ' ( Ramayana ) ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಇರುವ ಈ ಚಿತ್ರದಲ್ಲಿ ಓರ್ವ ನಟ ಮಾತ್ರ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಪಾತ್ರಗಳಲ್ಲಿ ಅಭಿನಯಿಸಿ ಅಚ್ಚರಿ ಮೂಡಿಸಿದ್ದಾರೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಆ ನಟ ಬೇರೆ ಯಾರೂ ಅಲ್ಲ, ಖ್ಯಾತ ನಟ ಚೇತನ್ ಹನ್ಸ್‌ರಾಜ್ (Chetan Hansraj). ಸಿನಿಮಾದ ಆರಂಭಿಕ ದೃಶ್ಯದಲ್ಲೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರು ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಚಿತ್ರದಲ್ಲಿ ಪ್ರಮುಖವಾಗಿ ರಾಜಾ ಮಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಚೇತನ್ ಹನ್ಸ್‌ರಾಜ್ ಪ್ರತಿದಿನ ಕನಿಷ್ಠ 4 ಗಂಟೆಗಳ ಕಾಲ ಸುದೀರ್ಘ ಮೇಕಪ್ (ಪ್ರೊಸ್ಥೆಟಿಕ್ಸ್) ಮಾಡಿಸಿಕೊಳ್ಳಬೇಕಿತ್ತು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಾವೇಕೆ ಇಷ್ಟು ದೊಡ್ಡ ಪಾತ್ರಗಳ ಜವಾಬ್ದಾರಿಹೊರಬೇಕಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. "ರಾಜಾ ಮಾಲಿ ಪಾತ್ರವಲ್ಲದೆ, ನಾನು ಇನ್ನೂ ಕೆಲವು ಪಾತ್ರಗಳಿಗಾಗಿ ಕೆಲಸ ಮಾಡಿದ್ದೇನೆ. ವಿಶೇಷವಾಗಿ ಅಂತಿಮ ಯುದ್ಧದ ಸನ್ನಿವೇಶಗಳಲ್ಲಿ ರಾಮ-ಲಕ್ಷ್ಮಣರನ್ನು ಬೆನ್ನಟ್ಟುವ ಅಸುರರಾದ 'ಖರ್' ಮತ್ತು 'ದೂಷಣ್' ಸೇರಿದಂತೆ ಒಟ್ಟು 6 ಇತರ ಪಾತ್ರಗಳಿಗೆ ಮೋಷನ್ ಕ್ಯಾಪ್ಚರ್ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಚೇತನ್ ಹನ್ಸ್‌ರಾಜ್ ತಿಳಿಸಿದ್ದಾರೆ.
ಸಿನಿಮಾದಲ್ಲಿ ಶ್ರೀರಾಮನು ಬವಂಡರದಲ್ಲಿ ಬಾಣ ಹೂಡುವ ಆ ದೃಶ್ಯ ಮತ್ತು ವಿಎಫ್‌ಎಕ್ಸ್ (VFX) ಮ್ಯಾಜಿಕ್ ಸದಾ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಯಶ್ ಅವರಂತಹ ದಿಗ್ಗಜರ ಜತೆ ಕೆಲಸ ಮಾಡಿದ ಅನುಭವ ಮತ್ತು ಈ ಸಿನಿಮಾದ ತಂತ್ರಜ್ಞಾನದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, "ಈ ಪಾತ್ರಕ್ಕೆ ತಯಾರಾಗಲು ಪ್ರತಿದಿನ 4 ಗಂಟೆಗಳ ಕಾಲ ಮೇಕಪ್ ಕುಳಿತುಕೊಳ್ಳುವುದು ಕಷ್ಟ ಎನಿಸಿದರೂ, ಚೇತನ್‌ನಿಂದ ರಾಜಾ ಮಾಲಿ ಆಗಿ ರೂಪಾಂತರಗೊಳ್ಳುವ ಆ ಪ್ರಕ್ರಿಯೆ ನನಗೆ ಅಪರೂಪದ ಅನುಭವ ನೀಡಿತು ಎಂದು ಹಂಚಿಕೊಂಡಿದ್ದಾರೆ.
ಕೇವಲ ಮೇಲ್ಮೈ ಮೇಕಪ್ ಮಾತ್ರವಲ್ಲದೆ, ಪಾತ್ರದ ಭಾವನೆಗಳು ಮತ್ತು ದೈಹಿಕ ಚಲನೆಗಳನ್ನು ತರಬೇತಿ ನಿರ್ದೇಶಕರ ಸಹಾಯದಿಂದ ಮೈಗೂಡಿಸಿಕೊಂಡಿದ್ದಾಗಿ ಚೇತನ್ ಅವರು ತಿಳಿಸಿದ್ದಾರೆ. ಇನ್ನು ಇಂದ್ರನ ಜತೆಗಿನ ಆ ವಿಶಿಷ್ಟ ಸೀಕ್ವೆನ್ಸ್‌ನ ವಿಎಫ್‌ಎಕ್ಸ್ ಕೆಲಸಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಪರಿಶ್ರಮ ಪಡಲಾಗಿದ್ದು, ಈ ನಿರ್ದಿಷ್ಟ ದೃಶ್ಯದ ಹಿಂದೆ ಬರೋಬ್ಬರಿ 3,000 ರಿಂದ 4,000 ಜನರು ಶ್ರಮಿಸಿದ್ದಾರೆ ಎಂದು ಚೇತನ್ ಅವರು ಸಿನಿಮಾದ ಮೇಕಿಂಗ್ ತೀವ್ರತೆಯನ್ನು ವಿವರಿಸಿದ್ದಾರೆ.
ಭಾರತೀಯ ಸಿನಿಮಾದ ಚರಿತ್ರೆಯಲ್ಲೇ ಅತ್ಯಂತ ಬೃಹತ್ ಬಜೆಟ್ ಮತ್ತು ತಂತ್ರಜ್ಞಾನದೊಂದಿಗೆ ರೂಪುಗೊಂಡಿರುವ ಈ ಚಿತ್ರದ ಭಾಗವಾಗಿರುವುದು ತಮಗೆ ಹೆಮ್ಮೆಯ ವಿಚಾರ ಎಂದು ಚೇತನ್ ಹೇಳಿದ್ದಾರೆ. ನಿತೇಶ್ ತಿವಾರಿ ಅವರ ನಿರ್ದೇಶನ ಹಾಗೂ ಅದ್ಭುತ ತಂತ್ರಜ್ಞಾನದ ಕಾರಣದಿಂದ 'ರಾಮಾಯಣ' ಸಿನಿಮಾವು ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬ ಉಂಟುಮಾಡುವ ದೃಶ್ಯಕಾವ್ಯವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದ್ದಾರೆ.
ಒಟ್ಟಿನಲ್ಲಿ, ಒಂದೇ ಸಿನಿಮಾದಲ್ಲಿ ಬರೋಬ್ಬರಿ 7 ವಿಭಿನ್ನ ಪಾತ್ರಗಳಿಗೆ ಜೀವತುಂಬುವ ಮೂಲಕ ಚೇತನ್ ಹನ್ಸ್‌ರಾಜ್ ಈ ಸಿನಿಮಾದ ಯಶಸ್ಸಿನಲ್ಲಿ ತಾವೂ ಪ್ರಮುಖರು ಎಂಬುದನ್ನು ಸಾಬೀತುಪಡಿಸಿದ್ದಾರೆ, (ಏಜೆನ್ಸೀಸ್).