

ಮುಂಬೈ: ಪ್ರಸ್ತುತ ಭಾರತ ಸೇರಿದಂತೆ ಜಾಗತಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿತೇಶ್ ತಿವಾರಿ ನಿರ್ದೇಶನದ ಹಾಗೂ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸದ್ಯ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ಕ್ಲಬ್ ಸೇರಿ ಹಳೆಯ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಈ ಮಧ್ಯೆ, ಚಿತ್ರದಲ್ಲಿನ ಕೈಕೇಯಿ ಪಾತ್ರದ ಬಗ್ಗೆ ಹರಿದುಬರುತ್ತಿರುವ ಅಭಿಪ್ರಾಯಗಳ ಕುರಿತು ಇದೀಗ ಬಾಲಿವುಡ್ ನಟಿ ಲಾರಾ ದತ್ತಾ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.
ರಾಮಾಯಣದಲ್ಲಿ ಕೈಕೇಯಿ ಎಂದಾಕ್ಷಣ ಕೆಲವರಿಗೆ ಮೊದಲು ನೆನಪಿಗೆ ಬರುವುದೇ ರಾಮನಿಗೆ 14 ವರ್ಷಗಳ ವನವಾಸ ವಿಧಿಸಿದ ವಿಲ್ಲನ್ ಎಂಬ ಚಿತ್ರಣ. ಆದರೆ, ಕೈಕೇಯಿಯ ವ್ಯಕ್ತಿತ್ವಕ್ಕೆ ಮತ್ತೊಂದು ಮಗ್ಗುಲೂ ಇದೆ ಎಂದಿರುವ ಲಾರಾ. ಆಕೆ ಕೇವಲ ದುಷ್ಟ ಮಲತಾಯಿ ಅಲ್ಲ, ಪ್ರೀತಿ, ತಾಯ್ತನ, ರಾಜಕೀಯ ಒತ್ತಡ ಮತ್ತು ಮಗನ ಹಕ್ಕಿನ ನಡುವಿನ ಸಂಘರ್ಷಕ್ಕೆ ಸಿಲುಕಿದ ಒಂದೊಳ್ಳೆ ವ್ಯಕ್ತಿತ್ವದ ಮಹಿಳೆ ಎಂದು ಬಣ್ಣಿಸಿದ್ದಾರೆ.
ರಾಮಾಯಣ ಚಿತ್ರದಲ್ಲಿ ಕೈಕೇಯಿ ಪಾತ್ರವನ್ನು ನಿಭಾಯಿಸಿರುವ ಲಾರಾ, ಆಕೆ ಭರತನಿಗಿಂತಲೂ ರಾಮನನ್ನು ಹೆಚ್ಚು ಪ್ರೀತಿಸುವ ತಾಯಿಯಾಗಿದ್ದಳು. ಊಟ ಮಾಡುವಾಗಲೂ ತನ್ನ ರಾಮನಿಗೆ ಮೊದಲ ತುತ್ತು ನೀಡುತ್ತಿದ್ದಳು. ಅಷ್ಟೇ ಅಲ್ಲ, ರಾಮನನ್ನು ಅಯೋಧ್ಯೆಯ ಯುವರಾಜನನ್ನಾಗಿ ಘೋಷಿಸಿದಾಗಲೂ ಆಕೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಬದಲಾಗಿ, ರಾಮನ ಪಟ್ಟಾಭಿಷೇಕದ ಸಂಭ್ರಮಕ್ಕಾಗಿ ಅತ್ಯುತ್ತಮ ಆಭರಣ ಮತ್ತು ಉಡುಪುಗಳನ್ನು ಆಯ್ಕೆ ಮಾಡುತ್ತಿದ್ದಳು ಎಂಬ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದಿದ್ದಾರೆ.
ಕೈಕೇಯಿ ಕೇವಲ ಮಂಥರೆಯ ಮಾತು ಕೇಳುವ ರಾಣಿ ಮಾತ್ರವಲ್ಲ. ಆಕೆಯ ಕುಟುಂಬದಲ್ಲಿ ಗಂಡುಮಕ್ಕಳೇ ಇದ್ದರು. ಕೈಕೇಯಿ ಒಬ್ಬಳೇ ಹೆಣ್ಣುಮಗಳು. ಜನನದ ಸಂದರ್ಭದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆಕೆಯನ್ನು ಮಂಥರೆಯೇ ಬೆಳೆಸಿದ್ದು. ಹೀಗಾಗಿ ಮಂಥರೆ ಆಕೆಗೆ ಕೇವಲ ಸೇವಕಿ ಆಗಿರಲಿಲ್ಲ. ತಾಯಿಯಂತೆಯೇ ಪ್ರಭಾವ ಹೊಂದಿದ್ದ ವ್ಯಕ್ತಿಯಾಗಿದ್ದಳು. ಮಂಥರೆ ಸ್ವಾರ್ಥಿ ಮತ್ತು ಕಪಟ ಸ್ವಭಾವದವಳಾಗಿದ್ದರೂ ಕೈಕೇಯಿಯ ಮೇಲೆ ಆಕೆಯ ಪ್ರಭಾವ ದೊಡ್ಡದಾಗಿತ್ತು. ಇಲ್ಲಿ ಕೈಕೆ ವಿಲ್ಲನ್ ಅಲ್ಲ, ಅವಳು ರಾಮನನ್ನು ಕಾಡಿಗೆ ಕಳುಹಿಸಿರಲಿಲ್ಲ ಅಂದಿದ್ರೆ, ರಾಮಾಯಣನೇ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕೈಕೇಯಿ ಒಮ್ಮೆ ಯುದ್ಧಭೂಮಿಯಲ್ಲಿ ದಶರಥನ ಜೀವ ಉಳಿಸಿದ್ದಳು. ಇದಕ್ಕೆ ಪ್ರತಿಯಾಗಿ ದಶರಥ ಆಕೆಗೆ ಎರಡು ವರಗಳನ್ನು ನೀಡುವ ಭರವಸೆ ಕೊಟ್ಟಿದ್ದನು. ಆದರೆ, ಆ ಸಮಯದಲ್ಲಿ ಕೈಕೇಯಿ ಅದನ್ನು ಕೇವಲ ತನ್ನ ಕರ್ತವ್ಯವೆಂದೇ ಪರಿಗಣಿಸಿದ್ದಳು. ದಶರಥ ಕೈಕೇಯಿಯನ್ನು ವಿವಾಹವಾಗಲು ಮುಂದಾದಾಗ, ಆಕೆಯ ತಂದೆಗೆ ತನ್ನ ಮಗಳು ಈಗಾಗಲೇ ಇಬ್ಬರು ರಾಣಿಯರಿರುವ ರಾಜನ ಮೂರನೇ ಪತ್ನಿಯಾಗುವುದು ಇಷ್ಟವಿರಲಿಲ್ಲ. ಆ ಕಾಲದಲ್ಲಿ ರಾಜಮನೆತನದ ವಿವಾಹಗಳು ರಾಜಕೀಯ ಮೈತ್ರಿಗಳ ಭಾಗವಾಗಿದ್ದವು. ಹೀಗಾಗಿ, ದಶರಥನು ಕೈಕೇಯಿಯ ಮಗನೇ ಅಯೋಧ್ಯೆಯ ಸಿಂಹಾಸನ ಏರಲಿದ್ದಾನೆ ಎಂದು ಆಕೆಯ ತಂದೆಗೆ ಭರವಸೆ ನೀಡಿದ್ದನು. ಅದು ಆತ ಹಿರಿಯ ಮಗನಾಗಿರಬೇಕೆಂಬ ಷರತ್ತು ಏನಿರಲಿಲ್ಲ ಎಂದಿದ್ದಾರೆ ಲಾರಾ.
ಹೀಗಾಗಿ ತನ್ನ ಮಗ ಭರತನಿಗೆ ಜನ್ಮಸಿದ್ಧವಾಗಿ ದೊರೆಯಬೇಕಿದ್ದ ಹಕ್ಕನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕೈಕೇಯಿಯ ಮುಂದಿತ್ತು. ಅಯೋಧ್ಯೆಯಂತಹ ದೊಡ್ಡ ರಾಜ್ಯದಲ್ಲಿ ಅರಮನೆಯ ರಾಜಕೀಯ ಮತ್ತು ಆಂತರಿಕ ಸಂಘರ್ಷಗಳ ನಡುವೆ ತನ್ನ ಮಗನ ಹಕ್ಕಿಗಾಗಿ ಹೋರಾಡುವುದು ಅಗತ್ಯವೆಂದು ಆಕೆ ಭಾವಿಸಿದ್ದಳು. ತಾಯಿಯ ಪ್ರೀತಿ ಮತ್ತು ಮಗನ ಹಕ್ಕನ್ನು ರಕ್ಷಿಸುವ ಕರ್ತವ್ಯದ ನಡುವೆ ಕೈಕೇಯಿ ಸಿಲುಕಿದ್ದಳು ಎಂದು ಹೇಳಿದ್ದಾರೆ.
ಕೈಕೇಯಿಯನ್ನು ಸದಾ ಖಳನಾಯಕಿಯಂತೆ ಬಿಂಬಿಸಲಾಗಿದೆ. ಆದರೆ, ಆಕೆಯ ಪಾತ್ರಕ್ಕೆ ಗೌರವ ಮತ್ತು ಘನತೆ ಕೊಡಬೇಕು. ರಾಮನ ವನವಾಸಕ್ಕೆ ಕಾರಣವಾದ ಕೈಕೇಯಿಯ ನಿರ್ಧಾರದಿಂದಲೇ ಸೀತೆಯ ಅಪಹರಣ ಸೇರಿ ರಾಮಾಯಣದ ಪ್ರಮುಖ ಘಟನೆಗಳು ನಡೆಯುತ್ತವೆ. ಇಲ್ಲದಿದ್ದರೆ ರಾಮ ಅಯೋಧ್ಯೆಯ ರಾಜನಾಗಿ ಎಲ್ಲರಂತೆ ರಾಜ್ಯಭಾರ ಮಾಡುತ್ತಿದ್ದ ಕಥೆಯಾಗಿ ಉಳಿಯುತ್ತಿತ್ತು ಎಂಬ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).