

ಕರೊನಾ ಹಾವಳಿ ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚುತ್ತಲೇ ಇದೆ. ಶೂಟಿಂಗ್ ಶುರು ಮಾಡಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ಚಿತ್ರತಂಡಗಳಲ್ಲಿ ಹಲವು ಗೊಂದಲ ಇವೆ. ಹೀಗಿರುವಾಗಲೇ ಬಾಲಿವುಡ್‍ನ ಜನಪ್ರಿಯ ಸೆಲೆಬ್ರಿಟಿಗಳೆಲ್ಲಾ ಶೂಟಿಂಗ್‍ಗೆ ಹೊರಡುವುದಕ್ಕೆ ತಯಾರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವರು ಈಗಾಗಲೇ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.
ಹಾಗಾದರೆ, ಬಾಲಿವುಡ್‍ನ ಚಿತ್ರಗಳ ಚಿತ್ರೀಕರಣ ಶುರುವಾಗಿದೆಯಾ ಎಂಬ ಪ್ರಶ್ನೆ ಬರುವುದು ಸಹಜ. ಹಾಗೇನಿಲ್ಲ. ಸೆಲೆಬ್ರಿಟಿಗಳೆಲ್ಲಾ ಹೊರಟಿರುವುದು ಜಾಹೀರಾತಿನ ಚಿತ್ರೀಕರಣಕ್ಕೆ. ಅಕ್ಷಯ್ ಕುಮಾರ್ ಈಗಾಗಲೇ ಕರೊನಾ ಕುರಿತಾದ ಜಾಗೃತಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ಸಹ ಇತ್ತೀಚೆಗೆ ತಮ್ಮ ಹುಟ್ಟೂರಿನಲ್ಲೇ ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಈ ಮಧ್ಯೆ ನಟಿ ವಿದ್ಯಾ ಬಾಲನ್, ನಾಲ್ಕು ತಿಂಗಳ ಲಾಕ್‍ಡೌನ್‍ನ ನಂತರ ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ನಡೆದ ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಂತೆ. ಅಷ್ಟೇ ಅಲ್ಲ, ಅರ್ಜುನ್ ಕಪೂರ್ ಸಹ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಲನಚಿತ್ರಗಳ ಚಿತ್ರೀಕರಣಕ್ಕಿಂತ ಜಾಹೀರಾತಿನ ಚಿತ್ರೀಕರಣ ಮಾಡುವುದು ಈಗ ಹೆಚ್ಚು ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಬರೀ ಬಾಲಿವುಡ್‍ನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಗರಿಗೆದರಲಿದೆ. ಅದಕ್ಕೆ ಈ ಜಾಹೀರಾತಿನ ಚಿತ್ರೀಕರಣ ಬಹಳ ಸಹಾಯವಾಗುತ್ತದೆ. ಇದೊಂಥರಾ ನೆಟ್ ಪ್ರಾಕ್ಟೀಸ್ ಇದ್ದಂತೆ ಎಂದು ಬಾಲಿವುಡ್‍ನ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಜಾಹೀರಾತಿನ ಚಿತ್ರೀಕರಣಕ್ಕೆ ಹೆಚ್ಚು ದಿನ ಅಥವಾ ಜನ ಬೇಕಾಗಿಲ್ಲ. ಕಡಿಮೆ ಜನರಿಟ್ಟುಕೊಂಡು ಬಹಳ ಬೇಗ ಚಿತ್ರೀಕರಣ ಮಾಡಬಹುದಾಗಿದೆ. ಮೇಲಾಗಿ ಕಳೆದ ನಾಲ್ಕು ತಿಂಗಳಿನಿಂದ ಕಲಾವಿದರೆಲ್ಲಾ ಕೂತುಕೂತು ಜಡ್ಡುಗಟ್ಟಿ ಹೋಗಿದ್ದಾರೆ. ಅವರಿಗೂ ಸಹ ಈ ಜಾಹೀರಾತಿನ ಶೂಟಿಂಗ್ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ.