

ಸುಶಾಂತ್ ಸಿಂಗ್ ಸಾವು ಬಾಲಿವುಡ್ನಲ್ಲಿ ಹುಟ್ಟುಹಾಕಿರುವ ಚರ್ಚೆ ಅಷ್ಟಿಷ್ಟಲ್ಲ. ಅದರಲ್ಲೂ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲೂ ಕರಣ್ ಜೋಹಾರ್ ತರಹದವರು, ತಮಗೆ ಇಷ್ಟವಾದವರನ್ನು ಮೇಲಕ್ಕೆತ್ತಲು ಹಲವರನ್ನು ತುಳಿದರು, ಹಾಗೆ ತುಳಿತಕ್ಕೊಳಗಾದವರಲ್ಲಿ ಸುಶಾಂತ್ ಸಿಂಗ್ ಸಹ ಒಬ್ಬರು ಎಂದು ಹೇಳಲಾಗುತ್ತಿದೆ.
ಬರೀ ಕರಣ್ ಅಷ್ಟೇ ಅಲ್ಲ, ಟಿವಿ ಕಾರ್ಯಕ್ರಮವೊಂದರಲ್ಲಿ ಸುಶಾಂತ್ ಸಿಂಗ್ ಅಂದರೆ, ಯಾರೋ ಗೊತ್ತೇ ಇಲ್ಲ ಎಂದು ಆಲಿಯಾ ಭಟ್ ಹೇಳಿಕೆಯೂ ಸಾಕಷ್ಟು ಟ್ರೋಲ್ಗಳಾಗುತ್ತಿದೆ. ಅಷ್ಟೇ ಅಲ್ಲ, ಸುಶಾಂತ್ ಅವರ ಸಾವಿಗೆ ಕರಣ್, ಆಲಿಯಾ ಮುಂತಾದವರೇ ಕಾರಣ ಎಂದು ಅವರಿಬ್ಬರ ಮೇಲೆ ಜವಾಬ್ದಾರಿ ಹೊರೆಸುವ ಪ್ರಯತ್ನಗಳೂ ಆಗುತ್ತಿವೆ. ಆದರೆ, ಇದು ಮೂರ್ಖತನ ಎಂದು ನಟಿ ಸ್ವರಾ ಭಾಸ್ಕರ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಅವರ ಸಾವಿಗೆ ಕರಣ್ ಮತ್ತು ಆಲಿಯಾ ಅವರನ್ನು ದೂರುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿರುವುದಷ್ಟೇ ಅಲ್ಲ, ಮೂರ್ಖತನ ಎಂದನಿಸುತ್ತಿದೆ. ಪ್ರಮುಖವಾಗಿ ಈ ಪ್ರಕರಣದಲ್ಲಿ ಸುಶಾಂತ್, ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿಲ್ಲ. ತನಗೇನಾಗುತ್ತಿದೆ, ಏನಾಗಿದೆ ಎಂದು ಸಹ ಹೇಳಿಕೊಂಡಿಲ್ಲ. ಹಾಗಾಗಿ ಸುಶಾಂತ್ ಸಾವಿಗೆ ಕಾರಣ ಏನು ಎನ್ನುವುದು ನಮಗ್ಯಾರಿಗೂ ಗೊತ್ತಿಲ್ಲ. ಸುಶಾಂತ್ಗೆ ತಮಗೇನು ಸಮಸ್ಯೆ ಇತ್ತು ಎಂದು ಹೇಳುವುದಕ್ಕೆ ಇಷ್ಟ ಇರಲಿಲ್ಲ ಎಂದನಿಸುತ್ತದೆ. ಹಾಗಾಗಿ ಅವರೇನೂ ಬರೆದಿಟ್ಟಿಲ್ಲ. ಹೀಗಿರುವಾಗ ಅವರ ಸಾವಿಗೆ ಇನ್ಯಾರನ್ನೋ ದೂಷಿಸುವುದು ಎಷ್ಟು ಸರಿ ಎಂದು ಸ್ವರ ಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ: ಆ ಆರು ಕಂಪನಿಗಳ ಮುಷ್ಠಿಯಲ್ಲಿದೆ ಬಾಲಿವುಡ್ …
ಅಷ್ಟೇ ಅಲ್ಲ, ಎಲ್ಲರೂ ತಮ್ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದು, ಇದೊಂದು ರೀತಿಯ ಗಾಸಿಪಿಂಗ್ನಂತಾಗಿದೆ. ಇದು ಸರಿಯಲ್ಲ ಎಂಬ ಅಭಿಪ್ರಾಯ ಅವರದ್ದು. ಸ್ವರಾ ಅವರ ಈ ಹೇಳಿಕೆಗೆ, ನೆಟ್ಟಿಗರು ಇನ್ನಷ್ಟು ಟೀಕಾ ಪ್ರಹಾರ ಮಾಡುತ್ತಿದ್ದಾರೆ.