ಸಲ್ಮಾನ್​ ಖಾನ್ ಕುಟುಂಬ ನನ್ನ ಹಾಳು ಮಾಡಿಬಿಟ್ಟಿತು!

Abhinav - Salman
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಕೇಳಿ ಬರುತ್ತಿದೆ. ಭಲಾಡ್ಯರು ಹೇಗೆ ತಮಗೆ ಬೇಕಾದವರನ್ನು ಮಾತ್ರ ಬೆಳೆಸುತ್ತಾರೆ ಮತ್ತು ತಮಗಾಗದವರನ್ನು ಹೇಗೆ ತುಳಿಯುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು, ಇದರಿಂದಾಗಿ ಸುಶಾಂತ್​ ಸಿಂಗ್​ ಸಾವಿಗೀಡಾಗಿದ್ದಾರೆ ಎಂದು ಕಂಗನಾ ಸೇರಿದಂತೆ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ, ಇದು ಆತ್ಮಹತ್ಯೆಯಲ್ಲಿ, ವ್ಯವಸ್ಥಿತ ಕೊಲೆ ಎಂದು ಆರೋಪ ಮಾಡಿದ್ದಾರೆ.

ಈಗ ನಿರ್ದೇಶಕ ಅಭಿನವ್​ ಕಶ್ಯಪ್​ ಸಹ ಇದನ್ನು ಪುಷ್ಠಿಕರಿಸಿದ್ದು, ಬಾಲಿವುಡ್​ನಲ್ಲಿ ಭಲಾಡ್ಯರು ಹೇಗೆ ಹೊಸಬರನ್ನು ತುಳಿದು ಬಿಸಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಸಹ ಅದೇ ತರಹ ನಿರಂತರವಾಗಿ ತುಳಿತಕ್ಕೊಳಗಾಗಿದ್ದು, ತಮ್ಮ ಅವನತಿಗೆ ಸಲ್ಮಾನ್​ ಕುಟುಂಬದವರೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಲ್ಮಾನ್​ ಖಾನ್ ಅಭಿನಯದ ಬ್ಲಾಕ್​ಬಸ್ಟರ್​ ಚಿತ್ರವಾದ ದಬಾಂಗ್​ ನಿರ್ದೇಶಿಸಿದವರು ಇದೇ ಅಭಿನವ್​. ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಸಹೋದರನಾದ ಅಭಿನವ್​, ದಬಾಂಗ್​ ನಂತರ ಅವರು ದಬಾಂಗ್​ 2 ಚಿತ್ರವನ್ನೂ ನಿರ್ದೇಶಿಸಬೇಕಿತ್ತು. ಆದರೆ, ಸಲ್ಮಾನ್​ ಸಹೋದರರಾದ ಅರ್ಬಾಜ್​ ಖಾನ್​ ಮತ್ತು ಸೋಹೈಲ್​ ಖಾನ್​ ಚಿತ್ರದಲ್ಲಿ ವಿಪರೀತ ತಲೆ ತೂರಿಸುತ್ತಾರೆ ಮತ್ತು ತಮಗೆ ಸ್ವಾತಂತ್ರ್ಯ ನೀಡುತ್ತಿಲ್ಲ ಎಂಬ ಬೇಸರದಿಂದ ಅವರು ಹೊರ ಬಂದಿದ್ದರು. ಆ ನಂತರ ಅಭಿನವ್​ ಕೆಲವು ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಪ್ರಯತ್ನಿಸಿದರೂ, ಅವರು ಮೇಲೇಳಲಿಲ್ಲ. ಸಲ್ಮಾನ್​ ಕುಟುಂಬದವರು ತಮ್ಮ ಎಲ್ಲಾ ಕೆಲಸಗಳಿಗೆ ಅಡ್ಡಿಪಡಿಸಿದ್ದರಿಂದ, ತಾವು ಉದ್ಧಾರವಾಗುವುದಕ್ಕೆ ಸಾಧ್ಯವಾಗಲೇ ಇಲ್ಲ, 10 ವರ್ಷಗಳ ಹಿಂದೆ ಶುರುವಾದ ಈ ಯುದ್ಧ ಇನ್ನೂ ನಡೆಯುತ್ತಲೇ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ದಬಾಂಗ್​ ಚಿತ್ರವಾದ ನಂತರ ಸಲ್ಮಾನ್​ ಕುಟುಂಬದವರು ನನಗೆ ನೀಡಿರುವ ಕಿರುಕುಳ ಅಷ್ಟಿಷ್ಟಲ್ಲ. ಅವರಿಂದ ನಾನು ದೂರವಿದ್ದರೂ, ಅವರು ನನ್ನನ್ನು ಬಿಡುತ್ತಿಲ್ಲ. ಏನೇ ಕೆಲಸ ಮಾಡಿದರೂ, ಅದಕ್ಕೆ ಅಡ್ಡಗಾಲು ಹಾಕುತ್ತಾರೆ. ಬೇರೆ ನಿರ್ಮಾಪಕರಿಗೆ ಚಿತ್ರ ಮಾಡುವುದಕ್ಕೆ ಮುಂದಾದರೂ, ಅದನ್ನು ತಪ್ಪಿಸುತ್ತಾ ಬಂದಿದ್ದಾರೆ ಎಂದು ಅಭಿನವ್​ ಆರೋಪ​ ಮಾಡಿದ್ದಾರೆ.

ಬರೀ ಕೆಲಸ ತಪ್ಪಿಸುವುದಷ್ಟೇ ಅಲ್ಲ, ನಿರಂತರವಾಗಿ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿರುವ ಅವರು, ಇದರಿಂದ ತಾವು ಡಿಪ್ರೆಶನ್​ಗೆ ಜಾರಿದ್ದಾಗಿ ಹೇಳಿದ್ದಾರೆ. ಇದೆಲ್ಲದರಿಂದ ನನ್ನ ಮಾನಸಿಕ ಸ್ಥಿತಿಗೆ ಸಾಕಷ್ಟು ಕಷ್ಟ ಆಗಿದ್ದು, ನನ್ನ ಪತ್ನಿಗೆ ಡೈವೋರ್ಸ್​ ಸಹ ನೀಡಬೇಕಾಯಿತು. ನನಗೆ ತೊಂದರೆ ಕೊಡುತ್ತಿರುವವರು ಯಾರು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಪ್ರಮುಖವಾಗಿ ಸಲ್ಮಾನ್​ ಖಾನ್​, ಸಹೋದರರಾದ ಅರ್ಬಾಜ್​ ಮತ್ತು ಸೋಹೈಲ್​ ಖಾನ್​, ತಂದೆ ಸಲೀಮ್​ ಖಾನ್​ ಇವರೆಲ್ಲಾ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಲೇ ಇರುತ್ತಾರೆ. ತಮ್ಮ ಹಣಬಲ, ರಾಜಕೀಯ ಬಲ ಉಪಯೋಗಿಸಿ ನನ್ನನ್ನು ತುಳಿಯುತ್ತಲೇ ಇರುತ್ತಾರೆ. ಸತ್ಯ ನನ್ನ ಕಡೆಗೆ ಇದ್ದು, ನಾನು ಸುಶಾಂತ್​ ತರಹ ಇದಕ್ಕೆ ಬಗ್ಗುವವನಲ್ಲ. ಇವರ ವಿರುದ್ಧ ಕೊನೆಯವರೆಗೂ ಹೋರಾಡುತ್ತೇನೆ ಮತ್ತು ಕೊನೆಯಲ್ಲಿ ಯಾರು ಉಳಿಯುತ್ತಾರೋ ನೋಡುತ್ತೇನೆ. ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದು ತಪ್ಪಾಯಿತು. ಈಗ ವಾಪಸ್ಸು ಕೊಡುವುದಕ್ಕೆ ಸೂಕ್ತ ಸಮಯ. ಇದು ಗೊಡ್ಡು ಬೆದರಿಕೆಯಲ್ಲ, ಓಪನ್​ ಚಾಲೆಂಜ್​ ಎಂದು ಸಲ್ಮಾನ್​ ಕುಟುಂಬಕ್ಕೆ ಸವಾಲು ಎಸೆದಿದ್ದಾರೆ ಅಭಿನವ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net