ಮುತ್ತಪ್ಪ ರೈ ಆಯ್ತು, ಇದೀಗ ಡಾನ್​ ಜಯರಾಜ್​ ಬಯೋಪಿಕ್​

Rai - Jayaraj
Published on

ಬೆಂಗಳೂರು: 80ರ ದಶಕದಲ್ಲಿ ಬೆಂಗಳೂರು ನಗರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಜಯರಾಜ್​ ಕುರಿತು ಇದುವರೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇದೆ. ಆ ಸಾಲಿಗೆ ಇದೀಗ 'ಜಾಂಟಿ ಸನ್​ ಆಫ್​ ಜಯರಾಜ್​' ಎಂಬ ಸಿನಿಮಾ ಸೇರ್ಪಡೆಯಾಗಿದೆ. ಈ ಚಿತ್ರವು ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದು, ನಟ-ಕೃಷಿ ಸಚಿವ ಬಿ.ಸಿ. ಪಾಟೀಲ್​, ಚಿತ್ರಕ್ಕೆ ಕ್ಲಾಪ್​ ಮಾಡುವ ಮೂಲಕ ಶುಭಕೋರಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ಜಯರಾಜ್​ ಅವರ ಮಗ ಅಜಿತ್​ ಜಯರಾಜ್​ ನಟಿಸುತ್ತಿದ್ದಾರೆ. ಹಾಗಂತ ಅವರೇ ತಮ್ಮಪ್ಪನ ಪಾತ್ರವನ್ನು ಮಾಡುತ್ತಿದ್ದಾರೆ ಅಂದುಕೊಳ್ಳುವ ಹಾಗಿಲ್ಲ. ಅಜಿತ್​ ಈ ಚಿತ್ರದಲ್ಲಿ ತಮ್ಮದೇ ಪಾತ್ರವನ್ನು ಮಾಡುತ್ತಿದ್ದು, ಜಯರಾಜ್​ ಅವರ ಪಾತ್ರಕ್ಕೆ ಸೂಕ್ತ ನಟರೊಬ್ಬರ ಹುಡುಕಾಟ ಇನ್ನೂ ನಡೆಯುತ್ತಿದೆ.

ಚಿತ್ರದ ಬಗ್ಗೆ 'ವಿಜಯವಾಣಿ'ಯೊಂದಿಗೆ ಮಾತನಾಡುವ ನಿರ್ದೇಶಕ ಆನಂದರಾಜ್​, 'ಚಿತ್ರವನ್ನು ಎರಡು ಭಾಗದಲ್ಲಿ ಮಾಡಲಾಗುತ್ತಿದ್ದು, ಮೊದಲ ಭಾಗದಲ್ಲಿ ಜಯರಾಜ್​ ಸಾಯುವ ಮುನ್ನ ನಡೆದ ಘಟನೆಗಳು ಹಾಗೂ ಸತ್ತ ನಂತರ ಏನೆಲ್ಲಾ ಆಗುತ್ತವೆ ಎಂಬ ವಿಷಯಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಜತೆಗೆ ಜಯರಾಜ್​ ಮಗನ ಜನನ ಮತ್ತು ಆತ ಏನೆಲ್ಲಾ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಿದ್ದೇವೆ. ಎರಡನೆಯ ಭಾಗದಲ್ಲಿ ಜಯರಾಜ್​ ಅವರ ಯೌವ್ವನದ ದಿನಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎನ್ನುತ್ತಾರೆ.

ಸದ್ಯ ಅವರು ಮೊದಲ ಭಾಗದ ಜೊತೆಗೆ ಎರಡನೆಯ ಭಾಗಕ್ಕೆ ಪೂರಕವಾದ ಒಂದಿಷ್ಟು ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ಹೊರಟಿದ್ದಾರೆ. ನಟಿ ತಾರಾ ನಾಯಕನ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಮೈಕೋ ನಾಗರಾಜ್, ಪೆಟ್ರೋಲ್​ ಪ್ರಸನ್ನ, ಸಚಿನ್​ ಪುರೋಹಿತ್​, 'ಬಿಗ್​ ಬಾಸ್​' ಕಿಶನ್​ ಮತ್ತು ಸೋನು ಪಾಟೀಲ್​, 'ಸಿಲ್ಲಿಲಲ್ಲಿ' ಆನಂದ್​ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net