

ಬೆಂಗಳೂರು: ಬಿಗ್ಬಾಸ್ ಸೀಸನ್ 4ರ ರನ್ನರ್ ಅಪ್ ಆಗಿದ್ದ ಸೇಲ್ಸ್ಮನ್ ದಿವಾಕರ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ್ ಅವರಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ದಿವಾಕರ್ ಕಣಕ್ಕಿಳಿಯಲಿದ್ದು, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದಾರೆ.
ಈ ಸಂಬಂಧ ವಿಜಯವಾಣಿ ಜತೆಗೆ ಮಾತನಾಡಿರುವ ದಿವಾಕರ್, ‘ನಾನು ಮೂಲತಃ ಮೈಸೂರು ಜಿಲ್ಲೆ ತಿ. ನರಸೀಪುರದವನಾದರೂ, ಶಿರಾದೊಂದಿಗೆ ಉತ್ತಮ ಬಾಂಧವ್ಯ ಇದೆ. ಸೇಲ್ಸ್ ಮೆನ್ ಆಗಿದ್ದಾಗ ಮತ್ತು ಬಿಗ್ಬಾಸ್ ಮುಗಿದ ಬಳಿಕವೂ ಸಾಕಷ್ಟು ಸಲ ಹೋಗಿಬಂದಿದ್ದೇನೆ. ಅಲ್ಲಿನ ಜನರೂ ಪರಿಚಿತರಿದ್ದಾರೆ. ಹಾಗಾಗಿ ನಾನ್ಯಾಕೆ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಆಲೋಚನೆ ಬಂತು. ಸ್ನೇಹಿತರೂ ನಿಲ್ಲುವಂತೆ ಬೆನ್ನುತಟ್ಟಿದ್ದಾರೆ’ ಎನ್ನುತ್ತಾರೆ ದಿವಾಕರ್.
ಸದ್ಯ ಒಂದಷ್ಟು ಪಕ್ಷಗಳ ಜತೆ ಟಿಕೆಟ್ ಸಲುವಾಗಿ ಮಾತುಕತೆ ನಡೆಸಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಅವರಿಂದ ಉತ್ತರ ಸಿಗಲಿದೆ. ಒಂದು ವೇಳೆ ಯಾವುದೇ ಟಿಕೆಟ್ ಸಿಗಲಿಲ್ಲ ಎಂದಾದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆ ದಿವಾಕರ್ ಹೇಳಿದ್ದಾರೆ.
ಸಾಮಾನ್ಯ ವ್ಯಕ್ತಿಯಾಗಿಯೇ ನಾನು ಬಿಗ್ಬಾಸ್ಗೆ ಬಂದೆ, ಅದರ ಬಳಿಕವೂ ಸಾಮಾನ್ಯನಾಗಿಯೇ ಇದ್ದೇನೆ. ಈಗಲೂ ನನ್ನ ಕೆಲಸ ಸೇಲ್ಸ್ ಮ್ಯಾನ್. ಪ್ರೀತಿ ತೋರುವ ಜನ ಸಾಕಷ್ಟಿದ್ದಾರೆ. ಅದೆಲ್ಲವೂ ಈ ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂಬುದು ದಿವಾಕರ್ ಮಾತು. ಅಂದಹಾಗೆ, ನವೆಂಬರ್ 3ರಂದು ಶಿರಾ ಉಪ ಚುನಾವಣೆ ನಡೆಯಲಿದೆ.