ರಾಜ್ಯ ಸರ್ಕಾರದಿಂದ ನೋಟಿಸ್​ ಜಾರಿ: ಬಿಗ್​ಬಾಸ್ ಸೀಸನ್​ 12ಕ್ಕೆ ಎದುರಾಯ್ತು ಸಂಕಷ್ಟ, ಶೋ ರದ್ದಾಗುತ್ತಾ? Bigg Boss Kannada 12

Bigg Boss Kannada 12
Published on

Bigg Boss Kannada 12 : ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್​ಬಾಸ್ ಕನ್ನಡ ಸೀಸನ್ 12’ ಶುರುವಾಗಿ ಕೇವಲ ಒಂದು ವಾರ ಮಾತ್ರ ಕಳೆದಿದೆ. ಎರಡನೇ ವಾರದ ಮೊದಲ ಹಂತದಲ್ಲೇ ಬಿಗ್​ಬಾಸ್​ ಶೋಗೆ ವಿಘ್ನವೊಂದು ಎದುರಾಗಿದೆ. ಶೋ ರದ್ದಾಗುವ ಭೀತಿ ಇದೀಗ ಶುರುವಾಗಿದೆ. ಅದಕ್ಕೆ ಕಾರಣ ರಾಜ್ಯ ಸರ್ಕಾರ ನೋಟಿಸ್​ ನೀಡಿರುವುದು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಬಿಗ್​ಬಾಸ್​ ಶೋ ಆಯೋಜಕರಾದ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 6ರ ಸೋಮವಾರದಂದು ಈ ನೋಟಿಸ್ ನೀಡಲಾಗಿದೆ.

ನೋಟಿಸ್​ ಏಕೆ?

ಕೆಎಸ್‌ಪಿಸಿಬಿ ಪ್ರಕಾರ, ವೆಲ್ಸ್​ ಸ್ಟುಡಿಯೋ ಸಂಸ್ಕರಿಸದ ತ್ಯಾಜ್ಯ ನೀರನ್ನು ಸರಿಯಾದ ಒಳಚರಂಡಿ ಹಾಗೂ ಸಂಸ್ಕರಣೆಯಿಲ್ಲದೆ ನೇರವಾಗಿ ಸಾರ್ವಜನಿಕ ಚರಂಡಿಗಳಿಗೆ ಬಿಡುತ್ತಿದೆ. ಈ ಕಾಯ್ದೆಯು 1974ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದರ ಪರಿಣಾಮವಾಗಿ, ಮಾಲಿನ್ಯ ಮಂಡಳಿಯು ಮುಂದಿನ ಸೂಚನೆ ನೀಡುವವರೆಗೂ ವೆಲ್ಸ್​ ಸ್ಟುಡಿಯೋ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ರಾಮನಗರ ಜಿಲ್ಲೆಯ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ಅಲ್ಲದೆ, ತಕ್ಷಣ ವಿದ್ಯುತ್ ಸರಬರಾಜು ಕಡಿತಗೊಳಿಸುವಂತೆ ಬೆಸ್ಕಾಂಗೆ ಸೂಚನೆ ನೀಡಲಾಗಿದೆ.

ಅಂದಹಾಗೆ, ಬಿಗ್​ಬಾಸ್​ ಸೆಟ್​ ಅನ್ನು ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ವರ್ಷ ಮಾರ್ಚ್ 19 ಮತ್ತು ಜೂನ್ 11 ರಂದು ಸ್ಥಳೀಯ ಅಧಿಕಾರಿಗಳು ಸ್ಥಳವನ್ನು ತಪಾಸಣೆ ನಡೆಸಿದ್ದರು. ಆದರೂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯ ಅನುಮತಿ ಪಡೆಯಲು ಸ್ಟುಡಿಯೋ ವಿಫಲವಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಮನೋರಂಜನಾ ಉದ್ಯಾನವನದ ಶೈಲಿಯ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್​ ಜಾರಿಯಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವು ಪ್ರಸ್ತುತ ಎರಡನೇ ವಾರದಲ್ಲಿದ್ದು, ಅಷ್ಟರಲ್ಲೇ ಶೋಗೆ ವಿಘ್ನ ಎದುರಾಗಿದೆ. 19 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದು, ಇಬ್ಬರು ಸ್ಪರ್ಧಿಗಳಿ ಎಲಿಮಿನೇಟ್​ ಆಗಿದ್ದಾರೆ. ಈಗಾಗಲೇ ಈ ಶೋ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಹೀಗಿರುವಾಗಿ ಈ ನೋಟಿಸ್​ ಜಾರಿಯಾಗಿರುವುದು ಶೋ ರದ್ದಾಗುವ ಭೀತಿ ಆವರಿಸಿದೆ. ಸದ್ಯ ಈ ಶೋ ಮುಂದುವರಿಯುತ್ತದೆಯೇ? ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇನ್ನು ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅಥವಾ ಮುಂದಿನ ಕ್ರಮದ ಬಗ್ಗೆ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಈ ಒಂದು ಬಿಗ್​ಬಾಸ್​ ಅಭಿಮಾನಿಗಳ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net