ಬೆಂಗಳೂರು: ಟಿಕ್ಟಾಕ್ ಮತ್ತು ಬಿಗ್ ಬಾಸ್ ಶೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿ ನಂತರ 'ರೌಡಿ ಬೇಬಿ' ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ದಿವ್ಯಾ ಸುರೇಶ್ ಈಗ ಮತ್ತೊಂದು ಕನ್ನಡದ ಸಿನಿಮಾಗೆ ಸಹಿ ಹಾಕಿದ್ದಾರೆ. ಹೌದು, ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಸುಪುತ್ರ ನಟ ರಾಜವರ್ಧನ್ ಅವರ ಬಹುನಿರೀಕ್ಷಿತ ಮೂರನೇ ಸಿನಿಮಾ ಆಗಿರುವ 'ಹಿರಣ್ಯ'ದಲ್ಲಿ ನಟಿ ದಿವ್ಯಾ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ, ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿ ದಿವ್ಯಾ ಸುರೇಶ್ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಪ್ರವೀಣ್ ಅವ್ಯುಕ್ತ್ ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ 'ಹಿರಣ್ಯ'ದಲ್ಲಿ ನಟ ರಾಜವರ್ಧನ್ ಹಾಗೂ ನಟಿ ದಿವ್ಯಾ ಸುರೇಶ್ ಅವರು ಇಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಆಗಿರುತ್ತಾರೆ ಎನ್ನಲಾಗಿದೆ. 'ನಾವು (ನಟ ರಾಜವರ್ಧನ್ ಹಾಗೂ ನಟಿ ದಿವ್ಯಾ ಸುರೇಶ್) ಒಟ್ಟಿಗೆ ನಟಿಸುವ ಅವಕಾಶ 'ಹಿರಣ್ಯ' ಸಿನಿಮಾ ಮೂಲಕ ನನಸಾಗ್ತಿದೆ' ಎಂದಿದ್ದಾರೆ ನಟಿ ದಿವ್ಯಾ ಸುರೇಶ್.